ಬೈಂದೂರು-ಜೂ17: ಇಂದು ಸಂಜೆ ತರಗತಿ ಮುಗಿಸಿ ಕಾಲೇಜಿನಿಂದ ಮನೆಗೆ ತೆರಬೇಕಿದ್ದ ವಿದ್ಯಾರ್ಥಿನಿ ಮನೆಯ ಸಮೀಪದಲ್ಲಿದ್ದ ಅಕೇಶಿಯಾ ತೋಪಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಬೈಂದೂರಿನ ಜ್ಯೂನಿಯರ್ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ(17) ಮೃತ ದುರ್ದೈವಿ.
ಘಟನೆಯ ವಿವರ:
ಹೇನಬೇರು ನಿವಾಸಿ ಬಾಬು ದೇವಾಡಿಗ ಎಂಬುವರ ಪುತ್ರಿ ಅಕ್ಷತಾ ಸಂಜೆಯಾಗದೂ ಕಾಲೇಜಿನಿಂದ ಮನೆಗೆ ಬಾರದ್ದರಿಂದ ಗಾಬರಿಗೊಂಡು ಪೋಷಕರು ಕಾಲೆಜಿಗೆ ಪೋನ್ ಮಾಡಿ ವಿಚಾರಿಸಿದಾಗ ಆಕೆ ಕಾಲೇಜು ಮುಗಿದ ಕೂಡಲೇ ಮನೆಗೆ ಹೊರಟ್ಟಿದ್ದಳು ಎಂದು ತಿಳಿಸಿದ್ದರು. ಇದರಿಂದ ಮತ್ತಷ್ಟು ಗಲಿಬಿಲಿಗೊಂಡ ಮನೆಯವರು ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದಾಗ, ಸಂಜೆ ಸುಮಾರು 6:30ರ ವೇಳೆಗೆ ಮನೆಯಿಂದ ಸ್ವಲ್ಪವೇ ದೂರವಿರುವ ಅಕೆಶಿಯಾ ತೋಪಿನಲ್ಲಿ ಕುತ್ತಿಗೆಗೆ ಶಾಲು ಸುತ್ತಿಕೊಂಡ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಶವದ ಬಳಿ ಆಕೆಯ ಬ್ಯಾಗ್, ವಾಟರ್ ಬ್ಯಾಗ್ ಪತ್ತೆಯಾಗಿದೆ.
ಎಸ್ಪಿ ಭೇಟಿ:
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಎಂ.ಮಂಜುನಾಥ ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕರಾದ ಪಿ.ಎಂ.ದಿವಾಕರ, ಬೈಂದೂರು ಉಪನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಉಪನಿರೀಕ್ಷಕ ಸುಬ್ಬಣ್ಣ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯುಲಾಗಿದೆ. ಬೈಂದೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.
ಪ್ರತಿಭಾನ್ವಿತ ವಿದ್ಯಾರ್ಥಿನಿ:
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅಕ್ಷತಾ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.93 ಅಂಕಗಳಿಸಿದ್ದಳು. ಕರ್ನಾಟಕ ಸರಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡುವ ಪ್ರಶಸ್ತಿಯನ್ನು ಇತ್ತಿಚಿಗೆ ಮೈಸೂರಿನಲ್ಲಿ ಸ್ವೀಕರಿಸಿದ್ದಳು.
ಕೊಲೆ ಶಂಕೆ:
ಅಕ್ಷತಾಳ ಶವ ಮನೆಗೆ ಬರುವ ಹಾದಿಯ ಒಲಭಾಗದ ಅಕೇಶಿಯಾ ತೋಪಿನಲ್ಲಿ ದೊರೆತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಕೆ ದಾರಿಯಲ್ಲಿ ನಡೆದು ಬರುತ್ತಿದ್ದನ್ನು ಅಕ್ಷತಾಳ ಹಿಂದೆ ಇದ್ದ ಸಂಬಂಧಿಯೇ ವೀಕ್ಷಿಸಿದ್ದರು. ಮುಂದೆ ದಾರಿಯಲ್ಲಿ ಎರಡು ಕವಲುಗಳಿದ್ದುದರಿಂದ ಅವರು ಬೇರೊಂದು ದಾರಿಯಲ್ಲಿ ನಡೆದರು. ಆದರೆ ಅಕ್ಷತಾ ಆ ದಾರಿಯಲ್ಲಿ ಹೋಗುವುಕ್ಕಿಂತ ಸ್ವಲ್ಪ ಮೊದಲಿಗೆ ಯಾರೋ ಒಬ್ಬ ಯುವಕ ಹಾದು ಹೊದದ್ದನ್ನು ಆಕೆಯ ಸಂಬಂಧಿ ಅವರು ಕಂಡಿದ್ದಾಗಿ ತಿಳಿಸಿದ್ದಾರೆ. ಆದರೆ ಆತ ಯಾರು ಎಂಬುದನ್ನು ಅಷ್ಟಾಗಿ ಗಮನಿಸಿರಲಿಲ್ಲ. ಕಾಲೇಜು ಯುವಕನಿರಬಹುದೆಂದು ಸುಮ್ಮನಾಗಿದ್ದಾರೆ. ಬೈಂದೂರಿನ ಸರ್ಕಾರೀ ಜ್ಯೂನಿಯರ್ ಕಾಲೇಜಿನ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಅಕ್ಷತಾ ಪ್ರತಿನಿತ್ಯ ದಾರಿ ಮಧ್ಯೆ ಇದ್ದ ಅರಣ್ಯ ಇಲಾಖೆಯ ಅಕೇಶಿಯಾ ತೋಪಿನ ಮೂಲಕವೇ ನಡೆದು ಬರುತ್ತಿದ್ದಳು.
ರತ್ನಾ ಕೋಠಾರಿ ಪ್ರಕರಣವನ್ನು ನೆನಪಿಸಿದ ಪ್ರಕರಣ:
ಕಳೆದ ವರ್ಷ ಜುಲೈ.7ರಂದು ಶಿರೂರಿನಲ್ಲಿ ನಡೆದ ರತ್ನಾ ಕೊಠಾರಿಯ ಸಾವಿಗೂ ಈ ಅಕ್ಷತಾಳ ಸಾವಿಗೂ ಸಾಮ್ಯತೆ ಇದೆ. ರತ್ನಾ ಕೊಠಾರಿಯ ಮೃತ ದೇಹವು ಮನೆಯ ದಾರಿಯ ಸಮೀಪದ ಸಮೀಪದ ಪೊದೆಯಲ್ಲಿ ಪತ್ತೆಯಾಗಿತ್ತು. ಆದರೆ ಆಕೆಯ ಮೃತಪಟ್ಟು ಒಂದೆರಡು ದಿನಗಳ ಬಳಿಕೆ ಶವ ದೊರೆತಿದ್ದರಿಂದ ಅದು ಸಂಪೂರ್ಣ ಕೊಳೆತುಹೊಗಿತ್ತು. ಯಾವುದೇ ಸಾಕ್ಷಾಧಾರಗಳೂ ದೊರೆತಿರಲಿಲ್ಲ. 8ತಿಂಗಳುಗಳ ಬಳಿಕ ಬಂದ ವಿಧಿವಿಜ್ಞಾನ ಕೇಂದ್ರದ ವರದಿಯಲ್ಲಿ ಇದು ಸಹಜ ಸಾವು ಎಂಬುದು ತಿಳಿಯಿತಾದರೂ ಪ್ರಕರಣದ ಕುರಿತು ಹಲವು ಸಂಶಯಗಳು ಇಂದಿಗೂ ಇದೆ. ಇದೀಗ ಅದೇ ರೀತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಸಾವಿಗೀಡಾಗಿದ್ದು ಇದರ ಹಿಂದಿನ ಸತ್ಯವನ್ನು ಭೇದಿಸಿ ಅಕ್ಷತಾಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಕಾರ್ಯಾಚರಣೆಗೆ ಮಳೆ ಅಡ್ಡಿ, ಮಾತಿನ ಚಕಮಕಿ:
ಒಂದೇ ಸವನೆ ಸುರಿಯುತ್ತಿದ್ದ ಮಳೆಯು ಪೊಲೀಸರ ಕಾರ್ಯಾಚರಣೆಗೆ ಅಡ್ಡಿಯನ್ನುಂಟುಮಾಡಿತು. ಸಂಜೆ 7ಗಂಟೆಯ ಸುಮಾರಿಗೆ ಆರಂಭಗೊಂಡ ಜಡಿ ಮಳೆಯು ರಾತ್ರಿ 9ರ ತನಕ ಒಂದೇ ಸವನೆ ಸುರಿಯುತ್ತಿತ್ತು. ಎಸ್ಪಿ ಆಗಮಿಸಿದಾಗ ಪ್ರರಣದ ಸತ್ಯಾಸತ್ಯೆಯನ್ನು ಕೂಡಲೇ ಬಯಲಿಗೆಳೆಯಬೇಕು ಅಲ್ಲಿಯವರೆಗೆ ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ಪಟ್ಟುಹಿಡಿದಾಗ, ಎಸ್ಪಿ ಕುಡಿದು ಮಾಡನಾಡಬೇಡಿ ತನಿಕೆಗೆ ಸಹಕರಿಸಿ ಎಂದು ಶವದ ಬಳಿಗೆ ನಡೆದಾಗ, ಊರಿನ ಗ್ರಾಮಸ್ಥರು ತಿರುಗಿಬಿದ್ದರು. ಪೊಲೀಸರಿಗೂ ಗ್ರಾಮಸ್ಥರಿಗೂ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಸ್ಥಳೀಯ ಮುಖಂಡರ ಮಧ್ಯಸ್ಥಿಕೆಯಲ್ಲಿ ಗ್ರಾಮಸ್ಥರ ಮನವೊಲಿಸಲಾಯಿತು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ತಾ.ಪಂ ಸದಸ್ಯ ರಾಜು ಪೂಜಾರಿ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಪಡುವರಿ ಗ್ರಾ. ಪಂ ಸದಸ್ಯ ಸುರೇಶ್ ಬಟವಾಡಿ ಮೊದಲಾದವರು ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದು ಪೊಲೀಸರಿಂದ ಮಾಹಿತಿ ಪಡೆದುಕೊಂಡು, ಶೀಘ್ರ ತನಿಕೆ ನಡೆಸುವಂತೆ ಕೇಳಿಕೊಂಡರು.