ಬೈಂದೂರು: ಮಾಜಿ ಕೇಂದ್ರ ಸಚಿವ ಸಚಿವ ಡಾ| ವೀರಪ್ಪ ಮೊಯ್ಲಿ ಮೃತ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮನೆಗೆ ಭೇಟಿ ನೀಡಿ ಆಕೆಯ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಬಳಿಕ ಊರಿನ ಪ್ರಮುಖರೊಂದಿಗೆ ಮಾತನಾಡಿ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳಿಂದ ಪಡೆದುಕೊಂಡಿದ್ದೇನೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅಕ್ಷತಾ ಮೃತಪಟ್ಟಿರುವುದು ಅತೀವ ನೋವು ತಂದಿದೆ. ಅಕ್ಷತಾಳ ಕನಸನ್ನು ಅವರು ತಂಗಿಯರಿಬ್ಬರು ಈಡೇರಿಸುವಂತಾಗಬೇಕು. ಆಕೆಯ ಇಬ್ಬರು ತಂಗಿಯರು ಏನೇ ಶಿಕ್ಷಣ ಪಡೆಯುವುದಿದ್ದರೂ ಅವರಿಗೆ ಆರ್ಥಿಕ ನೇರವನ್ನು ನೀಡಲು ದೇವಾಡಿಗ ಸಂಘದಿಂದ ಒಂದು ಫಂಡ್ ತೆಗೆದಿರಿಸುತ್ತೇನೆ ಎಂದರು.
ಊರಿನ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆಯನ್ನು ಶಾಮನಕೊಡ್ಲುವಿನಿಂದ ಹೇನುಬೇರಿಗೆ ಸೇರಿಸಲು ಪಿಡಬ್ಲ್ಯೂಡಿ ಇಲಾಖೆ ನಿರ್ದೇಶನ ನೀಡುವುದಾಗಿ ಭರವಸೆ ಇತ್ತರು. ಬೀದಿದೀಪಗಳ ಅಳವಡಿಕೆ, ಅಕೇಶಿಯಾ ಪ್ಲಾಂಟೆಶನ್ ತೆರವು, ಮಕ್ಕಳು ಶಾಲೆಗೆ ತೆರಳಲು ವಾಹನದ ವ್ಯವಸ್ಥೆಯ ಮುಂತಾದವುಗಳ ಕುರಿತು ಗ್ರಾಮಸ್ಥರು ಅಹವಾಲು ತೋಡಿಕೊಂಡಾಗ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಾಜಿ ಶಾಸಕ ಗೋಪಾಲ ಭಂಡಾರಿ, ತಾ.ಪಂ. ಸದಸ್ಯ ರಾಜು ಪೂಜಾರಿ, ಮುಖಂಡರುಗಳಾದ ರಾಜು ದೇವಾಡಿಗ, ಗಿರೀಶ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.