Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹನಿಗವಿ ಎಚ್. ದುಂಡಿರಾಜ್ ಅವರೊಂದಿಗೊಂದು ಸಂದರ್ಶನ
    ಸಂದರ್ಶನ

    ಹನಿಗವಿ ಎಚ್. ದುಂಡಿರಾಜ್ ಅವರೊಂದಿಗೊಂದು ಸಂದರ್ಶನ

    Updated:12/03/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಪ್ರವಾಹದ ಜೊತೆ ಕೊಚ್ಚಿ ಹೋಗುವ ಬದಲು, ಪ್ರವಾಹದೊಂದಿಗೆ ಹರಿದು ಬದುಕುವುದು ಜಾಣತನ: ದುಂಡಿರಾಜ್

    Click Here

    Call us

    Click Here

         Interview with dundiraj copy ಹನಿಗವನವನ್ನು ಸಾಹಿತ್ಯದ ಒಂದು ಪ್ರಕಾರ ಎಂದು ಗುರುತಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಹನಿಗವನದಲ್ಲೇ ತನ್ನ ಸಾಹಿತ್ಯ ಕೃಷಿಯನ್ನು ಮುಂದುವರಿಸಿ ಅದಕ್ಕೊಂದು ಮಾನ್ಯತೆ ತಂದುಕೊಟ್ಟವರು ಹನಿಗವಿ ದುಂಡಿರಾಜ್. ತನ್ನ ನಾಲ್ಕೈದು ಸಾಲಿನ ಕವಿತೆಯ ಮೂಲಕ ಕೋಟ್ಯಾಂತರ ಕನ್ನಡಿಗರ ಮನಸ್ಸನ್ನು ಗೆದ್ದ ದುಂಡಿರಾಜ್ ಕುಂದಾಪುರದ ಹಟ್ಟಿಕುದ್ರಿನವರು ಎಂಬುದು ನಮ್ಮೆಲ್ಲರ ಹೆಮ್ಮೆ. ದುಂಡಿರಾಜ್ ಅವರು ಹನಿಗವಿ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಅದರೆ ಅವರು ಹವಿಗವಿಯಾಗುವುದಕ್ಕೂ ಮೊದಲು ಉತ್ತಮ ಬರಹಗಾರರಾಗಿದ್ದರು, ನೀಳ್ಗವಿತೆಗಳನ್ನು ಬರೆಯುತ್ತಿದ್ದರು, ನಾಟಕಗಳನ್ನು ರಚಿಸಿದ್ದರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರದ ವಿಚಾರ. ಅವರು ಇತ್ತಿಚಿಗೆ ಖ್ಯಾತ ಜಾದೂಗಾರ ಓಂಗಣೇಶ್ ಉಪ್ಪುಂದ ಅವರ ಮನೆಯಲ್ಲಿ ಕುಂದಾಪ್ರ ಡಾಟ್ ಕಾಂ ಗೆ ಮಾತಿಗೆ ಸಿಕ್ಕಾಗ ತಮ್ಮ ಬದುಕು, ನಾಡು, ನುಡಿ, ಸಾಹಿತ್ಯದ ಆಗುಹೋಗುಗಳ ಬಗೆಗೆ ಕೆಲಹೊತ್ತು ಮಾತನಾಡಿದರು. ಅದರ ಪೂರ್ಣಪಾಠ ಇಲ್ಲಿದೆ.

    * ಸಾಹಿತಿಯಾಗಿ ಕನ್ನಡ ನಾಡು, ನುಡಿ, ಸಾಹಿತ್ಯಲೋಕವನ್ನು ಅವಲೋಕಿಸಿದಾಗ ತಮಗೇನನ್ನಿಸುತ್ತೆ?
    ನಾಡು ನುಡಿ ಸಾಹಿತ್ಯ ಇರುವುದರಿಂದಲೇ ಬದುಕು ಬಹಳ ಸುಂದರವಾಗಿ ಕಾಣುತ್ತದೆ. ಇಲ್ಲೊಂದು ಆಸಕ್ತಿ ಮೂಡಿದೆ. ಬುದುಕನ್ನು ಹೆಚ್ಚು ಸುಂದರಗೊಳಿಸೋದೆ ನಮ್ಮ ನಾಡು ನುಡಿ ಸಂಸ್ಕೃತಿ ಮುಂತಾದವುಗಳು.

    * ಬದಲಾಗುತ್ತಿರುವ ಸಾಹಿತ್ಯದ ಸ್ಥಿತಿಗತಿಗಳ ಬಗೆಗೆ ತಮ್ಮ ಅಭಿಪ್ರಾಯವೇನು?
    ಬದಲಾವಣೆಯನ್ನು ಯಾರಿಂದಲೂ ತಡೆಯಲಾಗುವುದಿಲ್ಲ. ಇದು ಒಂದು ಸಮೂಹ ಕ್ರೀಯೆ. ಆಧುನಿಕತೆಯಲ್ಲಿ ಕೊಚ್ಚಿ ಹೋಗದೇ ಅದನ್ನು ನಮ್ಮ ಯೋಚನೆ, ಯೋಜನೆಗೆ ತಕ್ಕಂತೆ ಬಳಸಿಕೊಂಡು ನಮ್ಮತನ ಉಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಬೇಕು. ಪ್ರವಾಹದಲ್ಲಿ ವಿರುದ್ಧ ನಿಂತು ಕೊಚ್ಚಿಹೋಗುವುದಕ್ಕಿಂತ ಪ್ರವಾಹದೊಂದಿಗೆ ಇದ್ದು ನಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಹೊಸದೇನಾದರೂ ಬಂದಾಗ ನಮ್ಮ ಸಂಸ್ಕೃತಿ ನಾಶವಾಗುತ್ತದೆಂಬ ಕಳವಳವನ್ನು ಸಹಜವಾಗಿ ವ್ಯಕ್ತಪಡಿಸುತ್ತೆವೆ. ಆದರೆ ನಾವು ಅಂದುಕೊಂಡಂತೆ ಆಗದು. ಬದಲಾವಣೆಗಳನ್ನು ತಡೆಯುವ ಬದಲು ಅಲ್ಲೊಂದು ಹೊಸ ಸಾಧ್ಯತೆಯನ್ನು ಗುರುತಿಸುವ ಕೆಲಸವಾಗಬೇಕು.

    * ಒಂದು ವರ್ಗ ಎಲ್ಲದರಿಂದ ದೂರ ಉಳಿದಿದೆಯೇನೊ ಎಂದೆನಿಸುವುದಿಲ್ಲವೇ?
    ಯಾರೂ ಕೂಡ ಬುದ್ಧಿಪೂರ್ವಕವಾಗಿ ಮಾಡುವುದಿಲ್ಲ. ಕಾಲಘಟ್ಟದಲ್ಲಿ ಅದು ಸಂಭವಿಸುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಆ ಸಮಯದಲ್ಲಿ ಎಲ್ಲವೂ ಹೊರಟುಹೊಯಿತು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಅದೇ ಮಕ್ಕಳು ಶಿಕ್ಷಣವನ್ನು ಪೂರೈಸಿ, ಒಳ್ಳೆಯ ನೌಕರಿಯನ್ನು ಗಿಟ್ಟಿಸಿಕೊಂಡ ಮೇಲೆ ಮತ್ತೆ ತಮ್ಮ ಆಸಕ್ತಿಯತ್ತ ಹೊರಳುತ್ತಾರೆ. ಒಂದು ಘಟ್ಟದಲ್ಲಿ ಸಾಹಿತ್ಯಕ್ಕೆ ಇದು ಹಿನ್ನಡೆ ಎನಿಸಿದರೂ ಮುಂದೆ ಪೂರಕವಾಗಿ ಗೋಚರಿಸುತ್ತೆ. ಈ ವಿಚಾರದಲ್ಲಿ ನಾನು ಆಶಾವಾದಿ.

    Click here

    Click here

    Click here

    Call us

    Call us

    * ಸಾಹಿತ್ಯ ಸಂಘಟನೆಗಳು ಸಾಹಿತ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆಯೇ?
    ಸಂಘಟನೆಯಲ್ಲಿ ನಾನು ಕಂಡುಕೊಂಡಿರುವ ಕೊರತೆಯೆಂದರೇ ಸರಿಯಾದ ನಾಯಕತ್ವ ಇಲ್ಲ. ಚಳುವಳಿಗಳು ರೂಪುಗೊಳ್ಳುತ್ತಿಲ್ಲ. ಮೊದಲೆಲ್ಲ ಸಾಹಿತ್ಯದಲ್ಲಿ ಚಳುವಳಿ ಇತ್ತು. ನವ್ಯ ಕಾವ್ಯ, ಬಂಡಾಯ ಕಾವ್ಯ ನಮ್ಮ ಯೋಚನೆ ದಾಟಿಯನ್ನು ಬದಲಿಸಿದಂತೆ ಹೊಸ ಮಾದರಿಗಳು ಇಂದು ಹುಟ್ಟಿಕೊಂಡಿಲ್ಲ.
    ಹಲವರಿಗೆ ಸಾಹಿತ್ಯ ಆಸಕ್ತಿ ಚನ್ನಾಗಿದ್ದರೂ ಅದರ ಪೂರಕವಾದ ಓದು, ಸಮಯದ ಕೊರತೆ ಮುಂತಾದವುಗಳಿಂದಾಗಿ ಹಿಂದೆ ಬೀಳುತ್ತಿದ್ದಾರೆ. ಎಲ್ಲದರ ಪರಿಣಾಮ ಒಳ್ಳೆಯ ಸಾಹಿತ್ಯ ರಚನೆಯಾಗುತ್ತಿಲ್ಲ.

    * ಒಳ್ಳೆಯ ಓದುಗನ್ನು ಮತ್ತೆ ಸೃಷ್ಟಿಸುವುದು ಹೇಗೆ?
    ಇ-ಮಾಧ್ಯಮಗಳ ಮೂಲಕ ಪರಿಚಯಿಸುವುದು, ಪುಸ್ತಕಗಳ ಒಂದು ಭಾಗವನ್ನು ಪ್ರಕಟಿಸುವುದು ಮುಂತಾದವುಗಳ ಮೂಲಕ ಯುವಜನರನ್ನು ಮತ್ತೆ ಸಾಹಿತ್ಯದೆಡೆಗೆ ಸೆಳೆಯುವಂತೆ ಮಾಡಬಹುದು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯವನ್ನು ಓದದೇ ಇರುವ ಸಾಫ್ಟವೇರ್ ಇಂಜಿನೀಯರ್ ಗಳು ಹಳೆಗನ್ನಡ ಸಾಹಿತ್ಯದ ಪಾಠವನ್ನು ಹಿರಿಯ ಸಾಹಿತಿಗಳಿಂದ ಹೇಳಿಸಿಕೊಳ್ಳುತ್ತಿರುವುದು ಸಾಹಿತ್ಯದ ಪೂರಕ ಬೆಳವಣಿಗೆ ಎನ್ನಬಹುದು.

    * ಕುಂದಾಪ್ರ ಕನ್ನಡ ಬಗೆಗೆ ತಮ್ಮ ಅಭಿಪ್ರಾಯ
    ಕುಂದಾಪ್ರ ಕನ್ನಡಕ್ಕೆ ಅದರದ್ದೇ ಆದ ವೈಶಿಷ್ಟ್ಯ ಇದೆ. ಕುಂದಾಪ್ರ ಕನ್ನಡ ಎಸ್.ಎಂ.ಎಸ್. ಇದ್ದ ಹಾಗೆ. ಅದರ ಸಂಕ್ಷಿಪ್ತ ರೂಪ ವಿಶೇಷವಾದ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ಇಲ್ಲಿನ ಉಟ ತಿಂಡಿ ಎಲ್ಲವೂ ಎಲ್ಲಿ ಹೋದರೂ ನೆನಪಾಗುತ್ತದೆ. ಕುಂದಾಪ್ರ ಕನ್ನಡದಲ್ಲಿ ಬರೆದದ್ದನ್ನು ಹೆಚ್ಚು ಜನರಿಗೆ ಮುಟ್ಟಿಸುವಲ್ಲಿ ನಾವು ಸೋಲುತ್ತಿದ್ದವೆ. ಈ ಭಾಷೆಯಲ್ಲಿ ಹೆಚ್ಚು ಬರೆಯಲು ಸಾಧ್ಯವಾಗದಿರುವುದು ಇದೇ ಕಾರಣಕ್ಕೆ. ಆದರೆ ಅಂತದ್ದೇ ವೇದಿಕೆ ಸಿಕ್ಕಾಗ ನಾವು ಅದರ ಬಗ್ಗೆ ಕೆಲಸ ಮಾಡಬಹುದು. ಭಾಷೆಯ ಬಗ್ಗೆ ಜನರಿಗೆ ಕೀಳರಿಮೆ ಇದೆ. ಬಾಲ್ಯದಿಂದಲೇ ಈ ಭಾವನೆಯನ್ನು ತುಂಬಲಾಗುತ್ತದೆ. ಇದು ನಿಲ್ಲಬೇಕು. ಭಾಷೆಯ ಬಗ್ಗೆ ಜನರು ಹೆಚ್ಚು ಆಸಕ್ತಿ ವಹಿಸಬೇಕಾಗಿದೆ.

    * ನಿಮ್ಮ ಬಾಲ್ಯ-ಕಾಲೇಜು ಜೀವನ ಹೇಗಿತ್ತು? ನಿಮ್ಮ ಸಾಹಿತ್ಯಾಭಿರುಚಿ ಬೆಳಸಿಕೊಳ್ಳಲು ಪೂರಕವಾಗಿತ್ತೆ?
    ಆ ಕಾಲದಲ್ಲಿ ಮನೆಯಲ್ಲಿ ಆರ್ಥಿಕವಾಗಿ ಬಡತನವಿದ್ದರೂ, ಸಾಂಸ್ಕೃತಿಕ ಶ್ರಿಮಂತಿಕೆ ಇತ್ತು. ಹತ್ತಿರದ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ ಭಜನೆ ನಡೆಯುತ್ತಿತ್ತು. ಆ ಭಜನೆಯನ್ನು ಕೇಳುತ್ತಿದ್ದ ನನಗೆ 5ನೇ ತರಗತಿಯ ವೇಳೆಗೆ ಬರೆಯುವುದಕ್ಕೆ ಪ್ರೇರೆಪಿಸಿತು. ಗೆಳೆಯರೊಂದಿಗೆ ಸೇರಿ ಕೈಬರಹದ ಪತ್ರಿಕೆ ಮಾಡುತ್ತಿದ್ದೆ. ಅದನ್ನು ನಾವು ಆಟವಾಡುವ ಅಂಗಡಿಯಲ್ಲಿ ಮಾರಾಟಕ್ಕಿಡುತ್ತಿದ್ದೆವು. ನಮ್ಮ ಶಾಲೆಯಲ್ಲಿ ಸೀತಾರಾಮ ಮಾಸ್ಟ್ರು ಪಠ್ಯಪುಸ್ತಕವನ್ನಲ್ಲದೇ ಬೇರೆ ಮಕ್ಕಳ ಕವನಗಳನ್ನು ತಂದು ಓದಿ ಪ್ರೋತ್ಸಾಹಿಸುವ ಪರಿಪಾಠ ಬೆಳೆಸಿಕೊಂಡಿದ್ದರು.
    ಮನೆಯಿಂದ ಹಟ್ಟಿಕುದ್ರಿನಲ್ಲೇ ಇದ್ದ ಪ್ರಾಥಮಿಕ ಶಾಲೆಗೆ ದೋಣಿಯಲ್ಲೇ ಹೋಗಬೇಕಿತ್ತು. ಒಂದೆರಡು ಬಾರಿ ದೋಣಿ ಮಗುಚಿ ಹೊಳೆಗೆ ಬಿದ್ದದ್ದು ಇದೆ. ನದಿಗೆ ಬಿದ್ದು ಮೇಲೆತ್ತಿದ್ದ ಮೇಲೆ ಕೂಡ ಸಾಯುತ್ತಾರೆ ಎಂದು ನಾನು ಅಂದುಕೊಂಡು ಅತ್ತಿದ್ದೆ. ಒಬ್ಬರು ಬಂದು ಗದರಿಸಿ ಹೇಳಿದ ಮೇಲೆ ಹಾಗೆ ಸಾಯಲಾರರು ಎಂಬ ಸತ್ಯದ ಅರಿವಾಗಿತ್ತು.
    ಮುಂದೆ ಬಸ್ರೂರು ಹೈಸ್ಕೂಲಿಗೆ ಹೋದಾಗ ಕೈಬರಹದ ಪತ್ರಿಕೆ ಇತ್ತು. ಅದರಲ್ಲಿ ಬರೆಯುತ್ತಿದ್ದೆವು. ಅದರೊಂದಿಗೆ ಉದಯವಾಣಿ, ಸುಧಾ ಪತ್ರಿಕೆಯ ಮಕ್ಕಳ ವಿಭಾಗದಲ್ಲಿ ನನ್ನ ಬರಹಗಳು ಪ್ರಕಟಗೊಳ್ಳುತ್ತಿದ್ದವು. ಆದರೆ ಮನೆಗೆ ಪತ್ರಿಕೆ ಬರುತ್ತಿಲ್ಲವಾದ್ದರಿಂದ ಅದು ಪ್ರಕಟಗೊಂಡಿರುವುದೇ ನನಗೆ ಗೊತ್ತಾಗುತ್ತಿರಲಿಲ್ಲ. ಯಾರೋ ಹೇಳಿದ ಮೇಲೆಯೇ ಗೊತ್ತಾಗುತ್ತಿತ್ತು.
    ಭಜನೆಯೊಂದಿಗೆ ನನ್ನ ತಂದೆಯವರು ರಾಮಾಯಣ, ಮಹಾಭಾರತವನ್ನು ಓದಿ ಮನೆಯಲ್ಲಿ ಸೇರುತ್ತಿದ್ದ ಊರವರಿಗೆ ಅದರ ಅರ್ಥವನ್ನು ಹೇಳುತ್ತಿದ್ದ ರೀತಿ ಕೂಡ ನನ್ನ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಲು ಕಾರಣವಾಗಿತ್ತು. ಎಸ್.ಎಸ್.ಎಲ್.ಸಿ ಯಲ್ಲಿ ನಾನು ತರಗತಿಗೆ ಮೊದಲು ಬಂದಿದ್ದೆ.
    ಮುಂದೆ ವಿಜಯ ಕಾಲೇಜಿಗೆ ಪಿ.ಯು.ಸಿ. ಶಿಕ್ಷಣಕ್ಕಾಗಿ ಬೆಂಗಳೂರಿನ ಅಣ್ಣನ (ಶಿವರಾಮ ಭಟ್) ಮನೆಗೆ ಹೋದಾಗ ಅಣ್ಣನ ಸಾಹಿತ್ಯಾಭಿರುಚಿ ಹಾಗೂ ಸಾಹಿತ್ಯದ ನಂಟು ನನಗೂ ಪ್ರೇರಣೆಯನ್ನು ನೀಡಿತು. ಅಡಿಗರು, ನಾಡಿಗರು, ನಿಸಾರ್ ಮುಂತಾದವರು ಮನೆಗೆ ಬರುತ್ತಿದ್ದರು. ಅವರ ಒಡನಾಟವೂ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿತ್ತು. ಬೆಂಗಳೂರಿನಲ್ಲಿಯೇ ಇಷ್ಟವಿಲ್ಲದೇ ಕೆಲಸಕ್ಕಾಗಿ ಅಗ್ರಿಕಲ್ಚರ್ ಬಿಎಸ್ಸಿ ಮಾಡಿದ್ದೆ.

    * ಹನಿಗವನಗಳನ್ನು ಮೊದಲಿನಿಂದಲೂ ಬರೆಯುತ್ತಿದ್ದಿದ್ದಿರಾ?
    ಇಲ್ಲ. ಮೊದಲು ಯಾವುದೇ ಹನಿಗವನಗಳನ್ನು ಬರೆಯುತ್ತಿರಲಿಲ್ಲ. ದೊಡ್ಡ ಕವಿತೆಗಳನ್ನೇ ಬರೆಯುತ್ತಿದ್ದೆ. ಧಾರಾವಾಡದಲ್ಲಿ ಎಂಎಸ್ಸಿ ಮಾಡುತ್ತಿರುವಾಗ ಒಂದು ನಾಟಕ ಬರೆದು ನಟಿಸಿದ್ದೆ. ಮೊದಲು ಉಪನ್ಯಾಸಕಾರನಾಗಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ನಾ. ದಾಮೋದರ ಶೆಟ್ಟಿ ಅವರ ತಂಡದಲ್ಲಿ ಈ ನಾನು ಬರೆದ ಮೊದಲ ‘ಓಡುವವರು’ ನಾಟಕ ಪ್ರದರ್ಶನಗೊಂಡಿತ್ತು. ನಾ ದಾಮೋದರ ಶೆಟ್ಟಿ, ಉದಯವಾಣಿಯ ಮನೋಹರ ಪ್ರಸಾದ್ ಮತ್ತು ಸುಧಾಕರ ಪೇಜಾರವ ಎಂಬುವವರು ಸೇರಿ ಮಾಡಿದ್ದ ‘ಭೂಮಿಕಾ’ ಎಂಬ ಪ್ರಕಾಶನದ ಮೂಲಕ ‘ಓಡುವವರು’ ನಾಟಕ ಪ್ರಕಟಗೊಂಡಿತ್ತು. ನಾ. ದಾಮೋದರ ಶೆಟ್ಟಿಯವರು ನನ್ನ ಮೊದಲ ಕೃತಿ ಪ್ರಕಟಿಸಿದ್ದರಿಂದ ಅವರಿಗೆ ಪಬ್ಲಿಶ್ವರ ಎಂದು ಕರೆಯುತ್ತಿದ್ದೆ. ಎರಡನೇ ಕೃತಿಯನ್ನು ಕಡೆಂಗೊಡ್ಲು ಕಾವ್ಯ ಪ್ರಶಸ್ತಿಗೆ ಕಳುಹಿಸಿದ್ದೆ. 1985ರಿಂದ ಹನಿಗವನಗಳನ್ನು ಬರೆಯಲು ಆರಂಭಿಸಿದೆ. ಮೊದಮೊದಲು ದಿನಕರ ದೇಸಾಯಿಯವರ ಶೈಲಿಯಲ್ಲಿ ಬರೆಯುತ್ತಿದ್ದೆ. ನಂತರ ಸುಬ್ರಾಯ ಚೊಕ್ಕಾಡಿಯವರ ಸಲಹೆಯಂತೆ ನನ್ನದೇ ಶೈಲಿಯನ್ನು ರೂಢಿಸಿಕೊಂಡೆ. ಇದು ಹೊಸ ಪ್ರಕಾರವಾಗಿ ಗುರುತಿಸಿಕೊಂಡಿತ್ತು.

    * ಹನಿಗವನಗಳ ಆಸಕ್ತಿ ಹೇಗೆ?
    ಹಾಸ್ಯ ನಮ್ಮ ಗುರಿಯೇ ಆಗಿರುವುದಿಲ್ಲ. ಅದೊಂದು ಮಾರ್ಗವಷ್ಟೇ. ಹಾಸ್ಯದ ಮೂಲಕ ಹೇಳಿದರೆ ಹೆಚ್ಚು ಜನರನ್ನು ತಲುಪುತ್ತೆ ಎಂಬ ಕಾರಣಕ್ಕಾಗಿ ನಾನದನ್ನು ಬಳಸಿಕೊಳ್ಳುತ್ತಿದ್ದೇನೆ. ಎಷ್ಟೋಸಾರಿ ಹಾಸ್ಯಕ್ಕಾಗಿ ಹಾಸ್ಯವಾಗುವುದು ಇದೆ.

    ಎಚ್. ಡುಂಡಿರಾಜ್ ಅವರ ಪರಿಚಯ

    ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿನಲ್ಲಿ ದಿ. ವೆಂಕಟರಮಣ ಭಟ್ ಹಾಗೂ ದಿ. ರಾಧಮ್ಮ ದಂಪತಿಗಳ ಮಗನಾಗಿ ಜನಿಸಿದ ದುಂಡಿರಾಜ್ ಅವರು ಸದ್ಯ ಕಾರ್ಪೋರೇಶನ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಈಗ ಮಂಗಳೂರಿನ ಮುಖ್ಯ ಶಾಖೆಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಮಡದಿ ಭಾರತಿಯೊಂದಿಗೆ ಮಂಗಳೂರಿನಲ್ಲಿ ಸುಖಿ ಜೀವನ ನಡೆಸುತ್ತಿರುವ ದುಂಡಿರಾಜ್ ಅವರಿಗೆ ಸಹಜಾ ಮತ್ತು ಸಾರ್ಥಕ್ ಎಂಬ ಇಬ್ಬರು ಮಕ್ಕಳಿದ್ದಾರೆ.
    ಈವರೆಗೆ ದುಂಡಿರಾಜ್ ಅವರ 43 ಕೃತಿಗಳು ಪ್ರಕಟಗೊಂಡಿದ್ದು ಅವುಗಳಲ್ಲಿ 9 ಕವನ ಸಂಕಲನಗಳು, 12 ಹನಿಗವನಗಳ ಸಂಗ್ರಹ, 10 ನಾಟಕ ಕೃತಿಗಳು, 10 ನಗೆ ಬರಹ, ಲಲಿತ ಪ್ರಬಂಧ ಮತ್ತು ಅಂಕಣ ಬರಹಗಳ ಸಂಗ್ರಹ ಒಂದು ಸಂಪಾದಿತ ಕೃತಿಯೂ ಸೇರಿದೆ. 4 ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ಈವರೆಗೆ ದುಂಡಿರಾಜ್ ಅವರಿಗೆ ಸುಮಾರು 18ಕ್ಕೂ ಹೆಚ್ಚು ಪ್ರಶಸ್ತಿ, ಗೌರವಗಳು ದೊರೆತಿವೆ.

    Write your comment to: editor@kundapra.com

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ರಾಮೀ ಗ್ರೂಪ್ಸ್ ಸಂಸ್ಥಾಪಕ, ಹೆಸರಾಂತ ಉದ್ಯಮಿ ವರದರಾಜ್ ಎಂ. ಶೆಟ್ಟಿ ಅವರ ವಿಶೇಷ ಸಂದರ್ಶನ

    14/12/2023

    Video ಅಪಘಾತಕ್ಕೀಡಾಗುವ ಅನಾಥ ಗೋವುಗಳ ಆಪತ್ಭಾಂದವ ಬೈಕ್ ಮೆಕ್ಯಾನಿಕ್ ಸಂಜೀವ

    14/10/2023

    INTERVIEW ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಮತವಾಗಲಿದೆ – ಗುರುರಾಜ ಶೆಟ್ಟಿ ಗಂಟಿಹೊಳೆ

    05/05/2023
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.