ಬೈಂದೂರು: ವರ್ಷಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸುರಭಿ ಸಂಸ್ಥೆ ಬೈಂದೂರಿನ ಜನರನ್ನು ಸಾಂಸ್ಕೃತಿಕ ವೈಭವದಲ್ಲಿ ಮಿಂದೇಳುವಂತೆ ಮಾಡಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ನಾಲ್ಕು ದಿನಗಳ ಸುರಭಿ ಕಲಾಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ವಿದ್ಯಾರ್ಥಿಗಳನ್ನೂ ಸಹ ಸಾಂಸ್ಕೃತಿಕವಾಗಿ ಅಣಿಗೊಳಿಸುತ್ತಿರುವ ಹಿರಿಮೆ ಈ ಸಂಸ್ಥೆಯದ್ದು ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕುಂದಾಪುರ ತಾ. ಪಂ. ಸದಸ್ಯ ರಾಜು ಪೂಜಾರಿ ಮಾತನಾಡಿ ರಥೋತ್ಸವದಿಂದ ಮಾತ್ರ ಬೈಂದೂರಿನ ಜಾತ್ರೆ ಪೂರ್ಣಗೊಂಡಂತಾಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜಾತ್ರೆ ವಿಶಿಷ್ಟವಾಗಿ ಮೂಡಿಬರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಪಾಲ್ಗೊಂಡು ಊರಿನ ಅಭಿವೃದ್ಧಿಯ ಬಗೆಗೆ ಚಿಂತಿಸುವಂತಾಗಬೇಕಿದೆ ಎಂದರು.
ಬೈಂದೂರು ಶ್ರಿ ಸೇನೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಖ್ಯ ಶಿಕ್ಷಣ ಸಂಸ್ಥೆಯ ರಿಯಾಜ್ ಅಹಮ್ಮದ್ ಅತಿಥಿಯಾಗಿ ಉಪಸ್ಥಿತರಿದ್ದರು.
ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷಣ ಕೊರಗ ವಂದಿಸಿದರು. ನಿರ್ದೇಶಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಸುಧಾಕರ ಪಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೊಡವೂರು ನೃತ್ಯ ನಿಕೇತನ ತಂಡದಿಂದ ‘ನೃತ್ಯ ಸಿಂಚನ’ ಜರುಗಿತು. 














