ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕ್ಯಾನ್ಸ್‌ರ್ ಚಿಕಿತ್ಸೆಗಾಗಿ ಬಂದಿದ್ದ ಯುವತಿಗೆ ಕೊರೋನಾ ಪಾಟಿಸಿವ್ ಇರುವುದು ದೃಢಪಟ್ಟಿದ್ದು, ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿತ್ರದುರ್ಗದಿಂದ 17 ವರ್ಷದ ಯುವತಿ ಕ್ಯಾನ್ಸರ್ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಬಂದ್ದಿದ್ದು, ಈ ಸಂದರ್ಭ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ವೈದ್ಯರುಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡಲು ಆರಂಭಿಸಿದ್ದರು. ಅಂತಿಮವಾಗಿ ವರದಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿತ್ತು.
ಯುವತಿಯು ಕ್ಯಾನ್ಸ್‌ರ್ ರೋಗಿಯಾಗಿರುವುದರಿಂದ ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಪರಿಣತರ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಿದ್ದು, ಆಕೆಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಯುವತಿ ಚಿತ್ರದುರ್ಗದಿಂದ ಬಂದಿರುವುದರಿಂದ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆಕೆಯ ಸಂಪರ್ಕಕ್ಕೆ ಬಂದಿರುವವರನ್ನು ಹುಡುಕಿ ಕ್ವಾರಂಟೈನ್‌ಗೆ ಒಳಪಡಿಸಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಕೊರೋನಾ ಪಾಸಿಟಿವ್ ಇರುವ ಗರ್ಭಿಣಿ ಮಹಿಳೆಗೆ ಚಿಕಿತ್ಸೆ:
ಮೇ.12ಕ್ಕೆ ಪತಿಯೊಂದಿಗೆ ಮಂಬೈನಿಂದ ಆಗಮಿಸಿ ಕೊಲ್ಲೂರಿನ ಕ್ವಾರಂಟೈನ್ ಕೇಂದ್ರವೊಂದರಲ್ಲಿ ತಂಗಿದ್ದ 28ವರ್ಷ ವಯಸ್ಸಿನ ಗರ್ಭಿಣಿ ಮಹಿಳೆಗೆ ಕೊರೋನಾ ಪಾಸಿಟಿವ್ ಮೇ.18ರಂದು ದೃಢಪಟ್ಟ ಬಳಿಕ ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಶೇಷ ನಿಗಾದಡಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಪತಿಯನ್ನು ಕುಂದಾಪುರ ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗಿದ್ದು, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಬೈನಿಂದ ಬಂದ ವಾಹನ ಹಾಗೂ ಕೊಲ್ಲೂರು ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 25 ಮಂದಿಯನ್ನು ಗುರುತಿಸಲಾಗಿದ್ದು, ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಗುತ್ತದೆ.ಕುಂದಾಪ್ರ ಡಾಟ್ ಕಾಂ ಸುದ್ದಿ.
ಇನ್ನು ಮಹಾರಾಷ್ಟ್ರದಿಂದ ಆರು ದಿನದ ಹಿಂದೆ ಬಂದು ಕೊಲ್ಲೂರಿನಲ್ಲಿ ಕ್ವಾರಂಟೈನ್ ಇರುವ 55 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಕೊರೋನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ, ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮೇ.19ರಂದು ಒಟ್ಟು 5 ಪ್ರಕರಣ ವರದಿಯಾಗಿದೆ. ಈವೆಗೆ ಒಟ್ಟು 11 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 15 ಮಂದಿ ಕೊರೋನಾ ಭಾದಿತರಲ್ಲಿ 3 ಮಂದಿ ಗುಣಮುಖರಾಗಿದ್ದು, ಓರ್ವ ವ್ಯಕ್ತಿ ಮೃತರಾಗಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಉಡುಪಿ: ಮುಂಬೈನಿಂದ ಬಂದ 4 ಮಂದಿ, ಚಿತ್ರದುರ್ಗದಿಂದ ಬಂದ ಓರ್ವರಿಗೆ ಕೊರೋನಾ ಪಾಸಿಟಿವ್ – https://kundapraa.com/?p=37691 .















