ರತ್ನಾ ಕೊಠಾರಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸರಕಾರ ವಿಫಲ: ಮುನೀರ್ ಕಾಟಿಪಳ್ಳ
ಬೈಂದೂರು: ನಿಗೂಢವಾಗಿ ಸಾವನ್ನಪ್ಪಿದ್ದ ಶಿರೂರು ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಪ್ರಕರಣಕ್ಕೆ ಒಂದು ವರ್ಷ ಸಂದರೂ ಈವರೆಗೆ ಆಕೆಯ ಸಾವಿನ ಕಾರಣವನ್ನು ಬಹಿರಂಗಪಡಿಸಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದಲ್ಲದೇ, ಮೃತಳ ಕುಟುಂಬಕ್ಕೆ ಸರಕಾರ ಘೋಷಿಸಿದ್ದ 3ಲಕ್ಷ ರೂಪಾಯಿಗಳನ್ನು ದೊರಕಿಸಿಕೊಡುವುದನ್ನು ಮರೆತಿರುವ ಬೈಂದೂರು ಕ್ಷೇತ್ರದ ಶಾಸಕರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಾಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಅವರು ರತ್ನಾ ಕೊಠಾರಿ ಕಳೆದ ವರ್ಷ ನಿಗೂಢವಾಗಿ ಸಾವನ್ನಪ್ಪಿದ ಸಾವಂತಗುಡ್ಡೆಯಿಂದ ಆರಂಭಗೊಂಡ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಿ ಬೈಂದೂರಿನ ಶಾಸಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು.
ಕಳೆದ ಒಂದು ವರ್ಷದಿಂದ ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸಂಘಟನೆಗಳು ನಿರಂತರವಾಗಿ ವಿದ್ಯಾರ್ಥಿನಿರ ಸಾವಿನ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಜನರ ಆಕ್ರೋಶದ ದಿಕ್ಕು ತಪ್ಪಿಸಲು ಬೈಂದೂರಿನ ಶಾಸಕರು 3 ಲಕ್ಷ ಪರಿಹಾರ ಘೋಷಣೆ ಮಾಡಿ ಸುಮ್ಮನಾಗಿದ್ದಾರೆ. ಪೊಲೀಸ್ ಇಲಾಖೆಯೂ ಚಾರ್ಜ್ ಶೀಟ್ ಸಲ್ಲಿಸದೇ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುನೀರ್, ಇನ್ನಾದರೂ ಬೈಂದೂರು ಕ್ಷೇತ್ರದ ಶಾಸಕರು ಎಚ್ಚೆತ್ತುಕೊಂಡು ಮೃತಳ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ರತ್ನಾ ಕೊಠಾರಿ, ಅಕ್ಷತಾ ದೇವಾಡಿಗ ಪ್ರಕರಣಗಳು ಒಂದೇ ವರ್ಷದಲ್ಲಿ ನಡೆದಿರುವುದು ಹಳ್ಳಿಗರನ್ನು ಬೆಚ್ಚಿ ಬೀಳಿಸಿದೆ. ಕಾಡು ಪ್ರದೇಶಗಳನ್ನು ದಾಟಿ ಬರುವ ವಿದ್ಯಾರ್ಥಿನಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹಳ್ಳಿ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ರಕ್ಷಣೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಶಿರೂರಿನ ಸಾವಂತಗುಡ್ಡೆಯಿಂದ ಆರಂಭಗೊಂಡ ಪ್ರತಿಭಟನಾ ಜಾಥಾವನ್ನು ಸಿಪಿಐ(ಎಂ) ಮುಖಂಡ ಎಚ್. ನರಸಿಂಹ ಉದ್ಘಾಟಿಸಿದರು.
ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ತಾಲೂಕು ಅಧ್ಯಕ್ಷ ಅಕ್ಷಯ ವಡೇರಹೊಬಳಿ, ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿ, ವಿದ್ಯಾರ್ಥಿ ನಾಯಕಿ ಅಫ್ರಿನ್, ಡಿವೈಎಪ್ಐ ಜಿಲ್ಲಾ ಕಾರ್ಯದರ್ಶಿ ಸುರೇಶ ಕಲ್ಲಾಗರ್, ಜಿಲ್ಲಾ ಸಂಚಾಲಕ ಕವಿರಾಜ್, ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೊಬಳಿ, ಸಿಐಟಿಯು ಮುಖಂಡರಾದ ವೆಂಕಟೇಶ ಕೋಣಿ, ದಾಸ್ ಭಂಡಾರಿ, ಗಣೇಶ ತೊಂಡೆಮಕ್ಕಿ, ಗಣೇಶ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

















