ಪಟ್ಟಾ ಜಾಗದಲ್ಲಿದ್ದ ನೀರು ಹರಿಯುವ ತೋಡನ್ನು ಬ್ಲಾಕ್ ಮಾಡಿದ ಮಾಲಿಕ. ತೆರವುಗೊಳಿಸಲು ಬಂದಿದ್ದಕ್ಕೆ ಅಡ್ಡ ಮಲಗಿ ಪ್ರತಿಭಟನೆ
ಕುಂದಾಪುರ: ಇಲ್ಲಿನ ಕೋಟಿಲಿಂಗೇಶ್ವರ ದೇವಸ್ಥಾನದ ಬಳಿಯ ಖಾಸಗಿ ಜಾಗದಲ್ಲಿ ತಡೆಹಾಕಲಾಗಿದ್ದ ನೀರಿನ ತೋಡನ್ನು ಕುಂದಾಪುರ ತಹಶೀಲ್ದಾರರು ಅಧಿಕಾರಿಗಳೊಂದಿಗೆ ತೆರವುಗೊಳಿಸಲು ತೆರಳಿದಾಗ ಅಧಿಕಾರಿಗಳ ಎದುರೇ ಆ ಜಾಗದ ವಾರೀಸುದಾರರು ಅಡ್ಡ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಕೋಟೇಶ್ವರದಲ್ಲಿ ನಡೆದಿದೆ.
ದೇವಸ್ಥಾನ ಬಳಿ ಇರುವ ಖಾಸಗಿ ಜಾಗದಲ್ಲಿ ಹರಿದು ಹೋಗುತ್ತಿದ್ದ ಗಲೀಜು ನೀರು ತೋಡನ್ನು ಸ್ಥಳದ ಮಾಲೀಕರು ಮುಚ್ಚಿ ಹಾಕಿದ್ದರು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿದ್ದು ನೀರು ಸರಾಗವಾಗಿ ಹರಿದು ಹೋಗಲು ಬ್ಲಾಕ್ ತೆರವುಗೊಳಿಸಿ ಅನುವು ಮಾಡಿಕೊಡುವುದಾಗಿ ಕುಂದಾಪುರ ಉಪವಿಭಾಗಾಧಿಕಾರಿ ಹೇಳಿದ್ದರು. ಅದರಂತೆ ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್ ಪೊಲೀಸ್ ಸಹಾಯದ ಜೊತೆ ತೋಡು ತೆರೆವಿಗೆ ಹೋದಾಗ ಜಾಗದ ಮಾಲೀಕರಾದ ಹರಿದಾಸ ಆಚಾರ್ಯ, ಪತ್ನಿ ಭಾಗೀರಥಿ ಮತ್ತು ಮಗ ಪದ್ಮನಾಭ ಆಚಾರ್ಯ ಜಾಗದಲ್ಲಿ ಅಡ್ಡಮಲಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ಮತ್ತು ಜಾಗದ ಮಾಲೀಕರು ಜೊತೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಪಟ್ಟು ಬಿಡದ ತಹಸೀಲ್ದಾರರು ಖಾಸಗಿ ಜಾಗದಲ್ಲಿನ ಚರಂಡಿ ತೆರವು ಮಾಡಿದ್ದಾರೆ. ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಪ್ರಭಾರ ಎಸೈ ಸುಬ್ಬಣ್ಣ ಇದ್ದರು ಸ್ಥಳದಲ್ಲಿದ್ದರು.
ನೀರು ಹರಿಯಲು ಬೇರೆ ವ್ಯವಸ್ಥೆ ಮಾಡುವ ಬದಲಿಗೆ ಪಟ್ಟಾ ಜಾಗದಲ್ಲಿ ಹರಿಯ ಬೀಡುವುದು ನ್ಯಾಯವಲ್ಲ ಎಂದು ಜಾಗದ ಮಾಲಿಕರು ತಮ್ಮ ಅಳಲು ತೋಡಿಕೊಂಡಿದ್ದರೇ, ಕಳದ ಹಲವು ವರ್ಷಗಳಿಂದ ನೀರು ಹರಿಯುತ್ತಿರುವ ತೋಡನ್ನು ಬ್ಲಾಕ್ ಮಾಡುವುದು ಸರಿಯಲ್ಲಿ ಇದರಿಂದ ದೇವಸ್ಥಾನ ಹಾಗೂ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು.














