ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಭಾಗದಲ್ಲಿ ಕಬಡ್ಡಿಯಲ್ಲಿ ಪಾಲ್ಗೊಂಡು ಅಷ್ಟಕ್ಕೇ ಸುಮ್ಮನಾಗಬೇಡಿ ಧೈರ್ಯ ಮತ್ತು ಛಲದಿಂದ ಮುನ್ನುಗ್ಗಿ. ರಾಜ್ಯ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿ ಎಂದು ಕಬ್ಬಡಿ ಖ್ಯಾತಿಯ ಸಚಿನ್ ಸುವರ್ಣ ಅಭಿಪ್ರಾಯಿಸಿದರು.
ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮೀಸಲಾತಿಯನ್ನು ಬಳಸಿಕೊಂಡು ಉದ್ಯೋಗ ಪಡೆಯುವಂತೆ ಪ್ರೇರೆಪಿಸಿದರು.

ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಜೀವನ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ವಿದ್ಯಾ ಸಂಸ್ಥೆ ಅನೇಕ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಆ ಮೂಲಕ ಜನತಾ ಕಾಲೇಜು ರಾಜ್ಯ ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಪಟು ಸಚಿನ್ ಸುವರ್ಣ ರನ್ನು ಸನ್ಮಾನಿಸಲಾಯಿತು.
ಕ್ರೀಡಾ ಬಹುಮಾನ ವಿತರಣೆ :
ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಕುಂದಾಪುರ ತಾಲ್ಲೂಕನ್ನು ಪ್ರತಿನಿಧಿಸಿದ ಜನತಾ ಪಿಯು ಕಾಲೇಜ್ ಹೆಮ್ಮಾಡಿ -ಪ್ರಥಮ ಸ್ಥಾನ ಪಡೆದರೆ, ಹೆಬ್ರಿ ತಾಲ್ಲೂಕನ್ನು ಪ್ರತಿನಿಧಿಸಿದ ಕೆಪಿಎಸ್ ಪಿಯು ಮುನಿಯಲು ದ್ವಿತೀಯ ಸ್ಥಾನ.
ಬಾಲಕಿಯರ ವಿಭಾಗ :
ಪ್ರಥಮ -ಉಡುಪಿ ತಾಲ್ಲೂಕು (ಸರಕಾರಿ ಪಿಯು ಕಾಲೇಜು ಉಡುಪಿ) ದ್ವಿತೀಯ -ಕಾರ್ಕಳ ತಾಲ್ಲೂಕು (ಎಸ್. ವಿ. ಟಿ. ಪಿಯು ಕಾಲೇಜ್ ಕಾರ್ಕಳ)
ಸಭೆಯಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಸುಕೇಶ್ ಕುಮಾರ್ ಶೆಟ್ಟಿ ಹೊಸ್ಮಠ, ಕುಂದಾಪುರ ತಾಲ್ಲೂಕು ಕ್ರೀಡಾ ಸಂಯೋಜಕರಾದ ರಾಮ್ ಶೆಟ್ಟಿ, ಬೈಂದೂರು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಜನತಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಉಪನ್ಯಾಸಕರಾದ ಉಮೇಶ್ ನಾಯ್ಕ ಸ್ವಾಗತಿಸಿ, ಉಪನ್ಯಾಸಕ ಅಲ್ತಾರು ನಾಗರಾಜ್ ನಿರೂಪಿಸಿ, ಆಂಗ್ಲಭಾಷ ಉಪನ್ಯಾಸಕಿ ಪ್ರಿಯಾoಕ ವಂದಿಸಿದರು.















