ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಲಿಸುತ್ತಿದ್ದ ಕಾರಿಗೆ ಅಚಾನಕ್ ಆಗಿ ಬೆಂಕಿ ತಗುಲಿ, ಸಂಪೂರ್ಣ ಕಾರು ಸುಟ್ಟು ಕರಕಲಾದ ಘಟನೆ ನಾವುಂದ ಫ್ಲೈಓವರ್ ಮೇಲೆ ಗುರುವಾರ ಮಧ್ಯಾಹ್ನ ನಡೆದಿದೆ.
ಕೋಟೇಶ್ವರದಿಂದ – ಉಪ್ಪುಂದ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ನಾವುಂದ ಪೇಟೆ ಬಳಿ ಬರುತ್ತಿದ್ದಂತೆ ಅಚಾನಕ್ ಆಗಿ ಬೆಂಕಿ ತಗುಲಿದೆ. ಕಾರಿನಲ್ಲಿ ಚಾಲಕ ಸಹಿತ ಇಬ್ಬರು ಪ್ರಯಾಣಿಸುತ್ತಿದ್ದು, ಫ್ಲೈಓವರ್ ಮೇಲೆ ಕಾರು ನಿಲ್ಲಿಸಿ ತಕ್ಷಣ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿತೀಶ್ ವಾಹನ ಚಲಾಯಿಸುತ್ತಿದ್ದು, ಅವರ ಅಜ್ಜಿ ಜೊತೆಯಲ್ಲಿದ್ದರು. ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಯಿತು. ಹೈವೇ ಪಟ್ರೋಲ್ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









