ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಕ್ಕಳು ಈ ದೇಶದ ಆಸ್ತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತು ದೇಶದಲ್ಲಿ ಪ್ರಚಲಿತವಾಗಿದೆ. ಆದರೆ ಮಕ್ಕಳ ರಕ್ಷಣೆಯ ಕ್ಷೇತ್ರದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಮಕ್ಕಳಿಗೆ ಸಂಬಂಧಿಸಿದ ಮಾಹಿತಿ, ಅವರ ಹಕ್ಕುಗಳು, ರಕ್ಷಣೆ ಮತ್ತು ಕಾಯ್ದೆಗಳ ಬಗ್ಗೆ ಮಾಹಿತಿಯ ಕೊರತೆ ಇದ್ದು ಅದನ್ನು ನೀಗಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ರಕ್ಷಣೆಯ ಕ್ಷೇತ್ರದಲ್ಲಿ ತೊಡಗಿರುವವರು ಮಕ್ಕಳ ಕಾನೂನುಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದಾಗ ಮಕ್ಕಳಿಗೆ ಪರಿಣಾಮಕಾರಿಯಾಗಿ ನ್ಯಾಯ ದೊರೆಯುತ್ತದೆ. ಮಕ್ಕಳ ನ್ಯಾಯವನ್ನು ಖಚಿತ ಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ದವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.
ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ರಜತಾದ್ರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
2023-2024ರ ಅಂಕಿ ಅಂಶಗಳ ಪ್ರಕಾರ ಈ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 40 ರಷ್ಟು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ. ಬೆಳೆಯುತ್ತಿರುವ ಮಕ್ಕಳ ಸಾಮಾಜಿಕ ಮತ್ತು ದೈಹಿಕ ಸ್ಥಿತಿಗತಿಗಳನ್ನು ಪರಿಗಣಿಸಿ ಅವರು ಎದುರಿಸುವ ಸಮಸ್ಯೆ, ತಲ್ಲಣ ಹಾಗೂ ಅವರ ದೈಹಿಕ ಮತ್ತು ಮಾನಸಿಕ ಅವಶ್ಯಕತೆಗಳ ಬಗ್ಗೆ ವಾಸ್ತವಿಕ ಅರಿವು ಹೊಂದಿ ಅವರ ಭವಿಷ್ಯವನ್ನು ರೂಪಿಸುವ ಅಗತ್ಯವಿದೆ. ವಿಶೇಷವಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ಆರೈಕೆ ಮತ್ತು ಅವರ ಅಗತ್ಯಗಳು ಸಾಮಾನ್ಯ ಮಕ್ಕಳಿಗಿಂತ ಹೆಚ್ಚಾಗಿರುತ್ತವೆ. ಜಿಲ್ಲೆಯಲ್ಲಿ 16,763 ಮಕ್ಕಳಿದ್ದು ಇದರಲ್ಲಿ ಸುಮಾರು 1.5 ಸಾವಿರದಷ್ಟು ಭಿನ್ನ ಸಾಮರ್ಥ್ಯದ ಮಕ್ಕಳೇ ಇದ್ದಾರೆ. ಇಂತಹ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಇವರ ಜೊತೆ ನೇರ ಸಂಪರ್ಕ ಹೊಂದಿರುವ ತಳಮಟ್ಟದ ಕಾರ್ಯಕರ್ತರು ಇವರ ಪುನರ್ವಸತಿಗೆ ಹೆಚ್ಚಿನ ಕಾಳಜಿ ವಹಿಸಿ ಅವರೂ ಕೂಡಾ ಸಾಮಾನ್ಯ ಮಕ್ಕಳಂತೆ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ದೇಶದ ಸಂವಿಧಾನವು ಎಲ್ಲ ನಾಗರಿಕರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲಾಗದ ಸಮಾಜದ ದುರ್ಬಲ ವರ್ಗವಾದ ಮಕ್ಕಳ ಹಕ್ಕುಗಳ ರಕ್ಷಣೆ ಸಂವಿಧಾನ ಬದ್ದ ಕರ್ತವ್ಯವೂ ಆಗಿದೆ. ಸಂವಿಧಾನದ 3 ನೇ ಭಾಗದಲ್ಲಿ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದೆ. ದೇಶದ ಪ್ರತಿಯೊಬ್ಬ ಮಗುವೂ ಕನಿಷ್ಠ ತಳಮಟ್ಟದ ಶಿಕ್ಷಣವನ್ನು ಹೊಂದಿರಬೇಕು ಎನ್ನುವ ಉದ್ದೇಶ ಇದರ ಹಿಂದಿದೆ. ಮಕ್ಕಳು ಶಾರೀರಿಕ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ, ನಲಿ-ಕಲಿ ಪಠ್ಯ ಕ್ರಮ, ಡಿಜಿಟಲ್ ಪಾಠಶಾಲೆಗಳು, ಸಮಗ್ರ ಶಿಕ್ಷಣ ಅಭಿಯಾನದಡಿ ಮೂಲಸೌಕರ್ಯ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ.
ಮಗು ಹುಟ್ಟುವುದಕ್ಕೂ ಮುಂಚೆ ಗರ್ಭಾವಸ್ಥೆಯಲ್ಲೇ ಮಗುವನ್ನು ವಿಶೇಷವಾಗಿ ಹೆಣ್ಣು ಮಗುವನ್ನು ರಕ್ಷಿಸುವ ಸಲುವಾಗಿ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಅಪ್ರಾಪ್ತ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ತೊಡಗಿಸದಂತೆ ಕಾರ್ಮಿಕ ಕಾಯ್ದೆ ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಪೋಕ್ಸೋ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಮಕ್ಕಳ ಭವಿಷ್ಯ ಹಾಳಾಗದಂತೆ ಮಕ್ಕಳಿಗಾಗಿ ಪ್ರತ್ಯೇಕ ಬಾಲಾಪರಾಧಿ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿಲಾಗಿದೆ. ಮಕ್ಕಳು ಸಾಮಾಜಿಕ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಗ್ರಾಮಸಭೆಗಳನ್ನು ಆಯೋಜಿಸಿ ಅವರ ವ್ಯಕ್ತಿತ್ವ ವಿಕಸನಗೊಳಿಸಿ ಅವರನ್ನು ಸತ್ಪçಜೆಗಳಾಗಿ ರೂಪಿಸುವ ಕಾರ್ಯ ನಡೆಯುತ್ತಿದೆ. ಮಕ್ಕಳಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಕ್ಕಳು ಅತ್ಯಂತ ದುರ್ಬಲರಾಗಿರುವುದರಿಂದ ಅವರ ಹಕ್ಕುಗಳ ರಕ್ಷಣೆಯಲ್ಲಿ ಹೆಚ್ಚು ಸಂವೇದನಾಶೀಲರಾಗಿ ವ್ಯವಹರಿಸಬೇಕು. ಅವರ ಜೊತೆ ವ್ಯವಹರಿಸುವಾಗ ಆ ಜಾಗದಲ್ಲಿ ತಮ್ಮನ್ನು ತಾವು ಕಲ್ಪಿಸಿಕೊಂಡು ಅವರಿಗೆ ನ್ಯಾಯ ಒದಗಿಸಬೇಕು. ಮಕ್ಕಳ ಜೊತೆ ವ್ಯವಹರಿಸುವ ಕಾರ್ಯಕರ್ತರು ತರಬೇತಿ ಕಾರ್ಯಕ್ರಮದಿಂದ ಪಡೆದುಕೊಂಡ ಅನುಭವಗಳನ್ನು ತಳಮಟ್ಟದಲ್ಲಿ ಅಳವಡಿಸಿ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಮಕ್ಕಳನ್ನು ರಕ್ಷಿಸಲು ಮುಂದಾಗಬೇಕು ಎಂದರು.
ಕೊಪ್ಪಳ ಮಕ್ಕಳ ಸಂರಕ್ಷಣಾ ಯೋಜನೆ, ಯುನಿಸೆಫ್ ಇದರ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ಹಕ್ಕು ಮತ್ತು ರಕ್ಷಣೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಉಡುಪಿ ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರತ್ನಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ, ಸುರಕ್ಷಾ ನಿರೂಪಿಸಿ ವಂದಿಸಿದರು.















