ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯ ವತಿಯಿಂದ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ತೆಂಗು ಅಭಿವೃದ್ಧಿ ಕುರಿತು ಬೃಹತ್ ಕಾರ್ಯಾಗಾರವು ಜನವರಿ 12ರಂದು ನಡೆಯಲಿದೆ ಎಂದು ಉಡುಪಿ – ಚಿಕ್ಕಮಂಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ತೆಂಗು ಅಭಿವೃದ್ಧಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೆಂಗು ಅಭಿವೃದ್ಧಿ ಕುರಿತು ಬೃಹತ್ ಕಾರ್ಯಾಗಾರವನ್ನು ಕುಂದಾಪುರ ತಾಲೂಕಿನಲ್ಲಿ ಆಯೋಜಿಸಲು ತಿಳಿಸಿದ ಅವರು, ಇದಕ್ಕಾಗಿ ಎರಡು ದಿನಗಳ ಒಳಗಾಗಿ ಸ್ಥಳ ಗುರುತಿಸುವುದರೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 16,252 ಹೆಕ್ಟೇರ್ ತೆಂಗು ಬೆಳೆ ಪ್ರದೇಶವನ್ನು ಹೊಂದಿದ್ದು, ಕರಾವಳಿ ಭಾಗದಲ್ಲಿ ಜೇಡಿ ಮತ್ತು ಮರಳು ಮಿಶ್ರಿತ ಮಣ್ಣು ಜೊತೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿರುವುದರಿಂದ ತೆಂಗು ಬೆಳೆ ಬೆಳವಣಿಗೆಗೆ ಸೂಕ್ತವಾಗಿದೆ. ಈ ಹಿನ್ನೆಲೆ ತೆಂಗು ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ದೇಶದ ವಿವಿಧೆಡೆಯಲ್ಲಿರುವ ತೆಂಗಿನ ಉತ್ಪನ್ನಗಳ ಪ್ರದರ್ಶನ, ತೆಂಗಿನ ಮೂಲಕ ನಿರ್ಮಾಣವಾಗುತ್ತಿರುವ ನೀರಾ, ಬೆಲ್ಲ, ಚಾಕಲೇಟ್ ಉತ್ಪನ್ನಗಳು ಮತ್ತು ಅಪರೂಪದ ತೆಂಗು ಉತ್ಪನ್ನಗಳ ಪ್ರದರ್ಶನಗಳು, ಸಣ್ಣ ಕೈಗಾರಿಕೆ, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳು ನಡೆಯಲಿದೆ ಎಂದರು.
ಕಾರ್ಯಾಗಾರದಲ್ಲಿ ವಿವಿಧ ಸ್ಟಾಲ್‌ಗಳು ಭಾಗವಹಿಸಿ, ತೆಂಗು ಅಭಿವೃದ್ಧಿ ಕುರಿತ ಪ್ರಾತ್ಯಕ್ಷಿಕೆ ನೀಡಲಿದ್ದು, ತೆಂಗು ಬೆಳೆಯಲ್ಲಿ ಅಪಾರ ಜ್ಞಾನ ಹೊಂದಿರುವ ಹಿರಿಯ ರೈತರುಗಳಿಗೆ ಸನ್ಮಾನ, ಭವಿಷ್ಯದಲ್ಲಿ ತೆಂಗು ಕೃಷಿಯಿಂದಾಗುವ ಪ್ರಯೋಜನಗಳು, ರೋಬೋಟಿಕ್ ಹಾರ್ವೆಸ್ಟರ್ ಕುರಿತು, ತೆಂಗು ಬೆಳೆಗೆ ದೊರೆಯುವ ಪ್ರೋತ್ಸಾಹಧನ, ದೈನಂದಿನ ಬಳಕೆಗೆ ಸ್ಥಳೀಯವಾಗಿ ತಯಾರಾಗುವ ತೆಂಗಿನ ಎಣ್ಣೆ, ಹಾಲು, ಕೊಬ್ಬರಿ, ತೆಂಗಿನ ನಾರು, ಹೈಬ್ರಿಡ್ ಮತ್ತು ಗಿಡ್ಡ ತಳಿಗಳ ಬಗ್ಗೆ ಮಾಹಿತಿ, ನೀರಾ ಘಟಕ ತಯಾರಿಸುವ ಪರ್ಯಾಯ ಆಯಾಮ, ತೆಂಗಿಗೆ ತಗುಲುವ ರೋಗ -ರೂಜಿನಗಳ ನಿರ್ವಹಣೆ ಹಾಗೂ ಚಿಕಿತ್ಸೆಯ ಬಗ್ಗೆ, ತೆಂಗು ವಿಮಾ ಯೋಜನೆ, ತೆಂಗಿನ ಚಿಪ್ಪಿನ ಬೇಡಿಕೆ ಸೇರಿದಂತೆ ಮತ್ತಿತರ ಅಗತ್ಯ ಮಾಹಿತಿಯನ್ನು ಬೆಳೆಗಾರರಿಗೆ ನೀಡಲಾಗುವುದು ಎಂದರು.
ಕಾರ್ಯಾಗಾರದಲ್ಲಿ ತೆಂಗಿನ ಉತ್ಪನ್ನಗಳ ಬಗ್ಗೆ ಅನುಭವಿ ತಜ್ಞರಿಂದ ಮಾಹಿತಿ ಒದಗಿಸಲಾಗುವುದು ಎಂದ ಅವರು, ರೈತಬಾಂಧವರು, ಸ್ವ-ಸಹಾಯ ಗುಂಪುಗಳ ಸದಸ್ಯರುಗಳು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಿಷ್ಠಾಚಾರದಂತೆ ಮುದ್ರಿಸಿ, ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದ ಅವರು, ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆ ಹೊಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜನವರಿ 12ರಂದು ನಡೆಯಲಿರುವ ತೆಂಗು ಅಭಿವೃದ್ಧಿಗೊಳಿಸುವ ಕುರಿತು ರೈತರು ಅಳವಡಿಸಿಕೊಳ್ಳಬೇಕಾದ ಆಧುನಿಕ ಬೇಸಾಯ ಪದ್ಧತಿ, ಉತ್ಪನ್ನಗಳ ಮೌಲ್ಯವರ್ಧನೆ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ಕಾರ್ಯಾಗಾರದಲ್ಲಿ ನೀಡಲಾಗುತ್ತಿದ್ದು, ರೈತರು ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಲು ಹಾಗೂ ತೆಂಗು ಬೆಳೆಗೆ ದೊರೆಯುವ ಸಹಾಯಧನಗಳ ಪ್ರಯೋಜನವನ್ನು ಪಡೆದುಕೊಂಡು ತೆಂಗಿನ ಮೌಲ್ಯವರ್ಧನೆಯಿಂದ ಹೆಚ್ಚಿನ ಲಾಭ ಪಡೆದು ಯಶಸ್ವಿ ರೈತರಾಗಿ ಹೊರಹೊಮ್ಮಬೇಕು ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಉಪನಿರ್ದೇಶಕ ಚಂದ್ರಶೇಖರ್ ನಾಯಕ್, ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಉಡುಪ, ಕೃಷಿ ವಿಜ್ಞಾನ ಕೇಂದ್ರದ ಧನಂಜಯ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.















