ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜನವರಿ ಎರಡನೇ ವಾರದಲ್ಲಿ ನಗರದಲ್ಲಿ ಸಾಂಸ್ಕೃತಿಕ ಉತ್ಸವ ಆಚರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರೊಂದಿಗೆ ವಿಜೃಂಭಣೆಯಿಂದ ಆಚರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಸಾಂಸ್ಕೃತಿಕ ಉತ್ಸವ ಆಯೋಜಿಸುವ ಕುರಿತು ಚರ್ಚಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತಹ ಅದರಲ್ಲೂ ವಿಶೇಷವಾಗಿ ಯುವಜನರು ಈ ಬಗ್ಗೆ ಉತ್ತೇಜಿಸುವ ರೀತಿಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಉಡುಪಿ ನಗರದಲ್ಲಿ ಆಯೋಜಿಸಲು ವ್ಯವಸ್ಥಿತವಾದ ರೂಪು ರೇಷೆಗಳನ್ನು ಮಾಡಿಕೊಳ್ಳುವುದರೊಂದಿಗೆ ಆಯೋಜಿಸಲು ಇಂದಿನಿಂದಲೇ ತಯಾರಿ ನಡೆಸಬೇಕೆಂದು ಸೂಚನೆ ನೀಡಿದರು.

ಉತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಆಕರ್ಷಕವಾಗಿ ಪ್ರಜ್ವಲಿಸುವಂತಹ ರೀತಿಯಲ್ಲಿ ದೀಪಗಳನ್ನು ಅಳವಡಿಸಬೇಕು. ಇವುಗಳ ಅಳವಡಿಕೆಗೆ ಖರ್ಚು ವೆಚ್ಚಗಳನ್ನು ಭರಿಸಲು ಅನುಕೂಲವಾಗುವಂತೆ ಪ್ರಾಯೋಜಕರನ್ನು ಸಂಪರ್ಕಿಸಬೇಕು. ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ಥಳೀಯ ಉತ್ತಮ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅನುವು ಮಾಡಿಕೊಡಬೇಕು ಇದರ ಜೊತೆಯಲ್ಲಿ ರಾಜ್ಯ ಹಾಗೂ ದೇಶದ ಹೆಸರಾಂತ ಕಲಾ ಪ್ರತಿಭೆಗಾರರನ್ನು ಕರೆಸಿ, ಪ್ರದರ್ಶನ ಏರ್ಪಡಿಸಬೇಕೆಂದು ಸಲಹೆ ನೀಡಿದರು.
ಉತ್ಸವದ ಅಂವಾಗಿ ಬೇರೆ ಬೇರೆ ಆಯ್ದ ಸ್ಥಳಗಳಲ್ಲಿ ವಿವಿಧ ಗೋಷ್ಠಿಗಳು, ನಾಟಕ, ನೃತ್ಯ, ಸಂಗೀತ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದ ಅವರು, ಇವುಗಳ ಯಶಸ್ಸಿಗೆ ಸ್ಥಳೀಯ ಸಂಘ-ಸಂಸ್ಥೆಗಳು, ಸ್ವಯಂ ಸೇವಕರ ಸಹಕಾರವನ್ನು ಪಡೆಯಬೇಕು. ಉತ್ಸವ ಕಾರ್ಯಕ್ರಮವು ಜನಾಕರ್ಷಣೆಗೊಳ್ಳುವಂತೆ ಸಣ್ಣ-ಸಣ್ಣ ವೀಡಿಯೋ ದೃಶ್ಯಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಮತ್ತಿತರಗಳ ಸಹಕಾರದೊಂದಿಗೆ ಹೆಚ್ಚಿನ ಪ್ರಚಾರ ನೀಡುವುದರೊಂದಿಗೆ ಹಬ್ಬದ ರೀತಿಯಲ್ಲಿ ಉತ್ಸವವನ್ನು ಆಯೋಜಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಲಾಫಿಂಗ್ ವಾಟರ್ ಪ್ರೋಡಕ್ಷನ್‌ನ ಸುನಿಲ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.















