ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆದಿದ್ದು, ದೇವಸ್ಥಾನದ 41 ಹುಂಡಿಗಳನ್ನು ಎಣಿಕೆಗಾಗಿ ತೆರೆಯಲಾಯಿತು. ಇದರಲ್ಲಿ ಮೇ ತಿಂಗಳಲ್ಲಿ ಭಕ್ತರಿಂದ ಅಪಾರ ಪ್ರಮಾಣದ ಕಾಣಿಕೆ ಸಂಗ್ರಹವಾಗಿರುವುದು ಕಂಡುಬಂದಿದೆ.

ದೇವಸ್ಥಾನ ಮೂಲಗಳ ಪ್ರಕಾರ, ಹುಂಡಿಗಳಲ್ಲಿ ಒಟ್ಟು 1,90,43,819 ರೂ. ನಗದು ಮೊತ್ತ ಲಭಿಸಿದೆ. ಇನ್ನು ಇತರೆ ಕಾಣಿಕೆಗಳನ್ನು ಸೇರಿಸಿ ಒಟ್ಟು ಸಂಗ್ರಹ ಮೊತ್ತ ರೂ 1,94,44,173ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಭಕ್ತರು ಕಾಣಿಕೆ ಯಾಗಿ ಸಲ್ಲಿಸಿದ್ದ 0.325 ಗ್ರಾಂ ಚಿನ್ನ ಹಾಗೂ 2.370 ಕೆ.ಜಿ ಬೆಳ್ಳಿಯೂ ಲಭ್ಯವಾಗಿದೆ.
ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಅಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಕ್ರಮಗಳೊಂದಿಗೆ ನಡೆಯಿತು. ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಕಾಣಿಕೆ ಸಂಗ್ರಹದಲ್ಲೂ ನಿರಂತರ ಏರಿಕೆ ಕಂಡುಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದ ಬಳಿಕ ಕೊಲ್ಲೂರು ರಾಜ್ಯದ ಎರಡನೇ ಶ್ರೀಮಂತ ದೇವಸ್ಥಾನವಾಗಿ ಪರಿಗಣಿಸಲ್ಪಟ್ಟಿದೆ.










