ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ಕ್ಷೇತ್ರದ ಮೀನುಗಾರರಿಗೆ ಲೈಫ್ ಜಾಕೆಟ್ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು ಮಾನವನ ಜೀವ ಅತ್ಯಮೂಲ್ಯವಾದದ್ದು, ಇಂದಿನ ದಿನಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೊಟ್ಟೆಪಾಡಿಗಾಗಿ ಮೀನುಗಾರಿಕೆಯಲ್ಲಿ ತೊಡಗಿರುವ ಸಮಯ ದುರ್ಘಟನೆಗಳಾಗಿ ಜೀವ ಕಳೆದುಕೊಳ್ಳುವ ಸಂದರ್ಭಗಳನ್ನು ಕಾಣುತ್ತಿದ್ದೇವೆ.

ಇದು ಅತ್ಯಂತ ದುರಾದೃಷ್ಟಕರ ಸಂಗತಿ. ಹಾಗಾಗಿ ಈ ಸಾಲಿನ ಸಮುದ್ರ ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಸಂಪ್ರದಾಯಿಕ ಮೀನುಗಾರಿಕೆಯಲ್ಲಿ ಹಾಗೂ ನದಿ ಪಾತ್ರಗಳಲ್ಲಿ ಇನ್ನಿತರ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೀನುಗಾರ ಬಾಂಧವರು ಅತ್ಯಂತ ಜಾಗರೂಕರಾಗಿದ್ದುಕೊಂಡು ಎಲ್ಲಾ ಸುರಕ್ಷತಾ ಕ್ರಮ ಅನುಸರಿಸಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದರು. ಲೈಫ್ ಜಾಕೆಟ್ ಸಾಕಷ್ಟು ಸಂಖ್ಯೆಯಲ್ಲಿ ವಿತರಣೆ ಆಗಿದ್ದು, ಅದನ್ನು ಪಡೆದುಕೊಂಡವರು ಅದರ ಸದ್ಭಬಳಕೆ ಮಾಡಲು ಕರೆ ನೀಡಿದರು
ಮೀನುಗಾರರಿಗೆ ಲೈಫ್ ಬಾಯ್ ಒದಗಿಸಲು ಅಧಿಕಾರಿಗಳಿಗೆ ಸೂಚನೆ:
ಪ್ರಸ್ತುತ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಲೈಫ್ ಜಾಕೆಟ್ ವಿತರಿಸಲಾಗಿದೆ. ಕೆಲವು ಕಡೆ ಮೀನುಗಾರರಿಂದ ಲೈಫ್ ಬಾಯ್ ಒದಗಿಸಲು ಬೇಡಿಕೆ ಇರುವುದಾಗಿದೆ. ಹಾಗಾಗಿ ಮುಂದಿನ ಬಾರಿ ಮೀನುಗಾರರ ಬೇಡಿಕೆಯಂತೆ ಲೈಫ್ ಬಾಯ್ ಒದಗಿಸಲು ಅಗತ್ಯ ಕ್ರಮವಹಿಸಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಹಾಗೂ ಇತರೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
















