ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರಿಗೆ ವಿವಿಧ ಕೌಶಲಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಬೇಸ್‌ನ ನಿರ್ದೇಶಕರಾದ ಡಾ. ರಾಮಪ್ರಸಾದ್ ಎಚ್.ಎಸ್. ಇಂದಿನ ದಿನಗಳಲ್ಲಿ ಶಿಕ್ಷಕರು ಅಭಿವೃದ್ಧಿಪಡಿಸಿಕೊಳ್ಳಬೇಕಾದ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿ, ಶಿಕ್ಷಕರನ್ನು ಅವುಗಳಲ್ಲಿ ತರಬೇತಿಗೊಳಿಸಿದರು. ಇಶಾ ಪೌಂಡೇಶನ್‌ನ ತರಬೇತಿದಾರರಾದ ಪ್ರವೀಣ್ ಅವರು ಈ ದಿನಗಳಲ್ಲಿ ಉಪಸ್ಥಿತರಿದ್ದು, ಮನಸ್ಸಿನ ನಿಯಂತ್ರಣ, ಒತ್ತಡ ನಿವಾರಣೆ, ದೈಹಿಕ ಆರೋಗ್ಯ- ಮಾನಸಿಕ ನೆಮ್ಮದಿಗಳ ಸಂಪಾದನೆಯನ್ನು ಯೋಗಮಾರ್ಗದ ಮೂಲಕ ಹೇಗೆ ಸಾಧಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ಕೆಲವಷ್ಟು ಸಾಮಾನ್ಯ ಯೋಗಗಳ ಪ್ರಕ್ರಿಯೆಗಳಲ್ಲಿ ತರಬೇತಿ ನೀಡಿದರು.
ಸುಮಾರು 200 ಜನ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಉತ್ತಮ ಮಾರ್ಗದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಶಾಲೆಯ ಪ್ರಾಂಶುಪಾಲರು, ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ವಿವಿಧ ಕೌಶಲಗಳನ್ನು ಅರಿತಿದ್ದು, ಬಹಳ ಚುರುಕುತನದಿಂದ ಕೂಡಿರುತ್ತಿದ್ದಾರೆ. ಪ್ರತಿವರ್ಷ ಒಂದೇ ರೀತಿಯ ಪಾಠಪ್ರವಚನಗಳು ಅವರಿಗೆ ರುಚಿಸುವುದಿಲ್ಲ. ಆದ್ದರಿಂದ ಶಿಕ್ಷಕರೂ ಸಹ ಮಕ್ಕಳ ಮನೋರಂಜನೆಗೊಳಿಸತಕ್ಕ ಕೌಶಲಗಳಿಂದ ಕೂಡಿರತಕ್ಕದ್ದು. ಈ ಸದುದ್ದೇಶದಿಂದ ದೇಶ ಸುತ್ತಿ ಸಾವಿರಾರು ಜನರನ್ನು ತರಬೇತಿಗೊಳಿಸುತ್ತಿರುವ ರಾಮಪ್ರಸಾದ್ ರವರ ಮಾರ್ಗದರ್ಶನವನ್ನು ನಾವು ಕೂಡ ಪಡೆದುಕೊಳ್ಳುತ್ತಿದ್ದೇವೆ. ಸದ್ಗುರುವಿನ ಇಶಾ ಪೌಂಡೇಶನ್‌ನ ಮೂಲಕ ಸಾವಿರಾರು ಜನರು ನೆಮ್ಮದಿಯನ್ನು ಪಡೆಯುತ್ತಿದ್ದು, ಅದರ ತರಬೇತಿದಾರರಾದ ಪ್ರವೀಣ್ ಅವರ ಮಾರ್ಗದರ್ಶನ ನಮ್ಮ ನೆಮ್ಮದಿಗೆ ಸಹಕಾರಿಯಾಗಿದೆ. ಕೆಲವಷ್ಟು ಯೋಗಾಸನಗಳ ಅಭ್ಯಾಸವನ್ನು ಶಿಕ್ಷಕ-ಶಿಕ್ಷಕೇತರ ವೃಂದದವರೂ ಹೊಂದಿರಬೇಕು. ಸರ್ವರೂ ಆರೋಗ್ಯದಿಂದಿರಬೇಕು ಮತ್ತು ವಿದ್ಯಾರ್ಥಿಗಳಿಗೆ ಯೋಗಾಸನಗಳ ಅಭ್ಯಾಸ ನಡೆಸುವ ಮೊದಲು ಪ್ರತಿಯೊಬ್ಬ ಶಿಕ್ಷಕನೂ ಅರಿತಿದ್ದರೆ ಕೆಲಸ ಸುಲಭ ಸಾಧ್ಯ. ಆದ್ದರಿಂದ ಈ ಕಾರ್ಯಾಗಾರಗಳನ್ನು ನಡೆಸಿರುತ್ತೇವೆ ಎಂದು ತಿಳಿದರು.
ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










