ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರವಾಸಕ್ಕೆಂದು ಆಗಮಿಸಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೋರ್ವ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಹಾವೇರಿ ಸಮೀಪದ ಕೃಷಿ ನಗರದ ನಿವಾಸಿ ಆಯುಷ್ (16) ಎಂದು ಗುರುತಿಸಲಾಗಿದೆ.
ಹಾವೇರಿ ಸಮೀಪದ ಕೃಷಿ ನಗರದ ಒಟ್ಟು 7 ಜನ ಮುರುಡೇಶ್ವರ, ಕನ್ಯಾಕುಮಾರಿ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಶಿರೂರು ಸಂಕದಗುಂಡಿ ಹೊಳೆ ಬಳಿ ವಿಶ್ರಾಂತಿಗೆ ತಮ್ಮ ವಾಹನ ನಿಲ್ಲಿಸಿದ್ದರು. ಈ ಸಂದರ್ಭ ಮನೆಯವರೆಲ್ಲ ಊಟದ ತಯಾರಿಯಲ್ಲಿರುವ ವೇಳೆ ಇಬ್ಬರು ಮಕ್ಕಳು ಪಕ್ಕದಲ್ಲಿರುವ ಹೊಳೆಗೆ ಸ್ನಾನಕ್ಕೆ ತೆರಳಿದ್ದರು. ಶಿರೂರು ಸಂಕದಗುಂಡಿ ಹೊಳೆಯ ಆಳ ಇರುವ ಜಾಗದಲ್ಲಿ ಈಜಲು ತೆರಳಿದ ಕಾರಣ ನೀರಿನ ಆಳ ತಿಳಿಯದೆ ಬಾಲಕ ಮುಳುಗಿದ್ದಾನೆ. ತತ್‌ಕ್ಷಣ ಇನ್ನೊಬ್ಬ ಮನೆಯವರಿಗೆ ವಿಷಯ ತಿಳಿಸಿದ್ದು, ಬದುಕಿಸುವ ಪ್ರಯತ್ನ ಮಾಡಿದರು ಕೂಡ ಫಲ ನೀಡಿಲ್ಲ.
ಅಜ್ಜನ ಜತೆ ಪ್ರವಾಸಕ್ಕೆ ಹೊರಟಿದ್ದ
ಬಾಲಕನ ನತಂದೆ, ತಾಯಿ ಗುಜರಾತ್‌ನಲ್ಲಿ ಸಣ್ಣವ್ಯವಹಾರ ನಡೆಸುತ್ತಿದ್ದು ಅಲ್ಲಿಯೆ ಈತ ಎಸೆಸೆಲ್ಸಿ ವಿದ್ಯಾರ್ಥಿ. ರಜೆಯಲ್ಲಿ ಅಜ್ಜನ ಮನೆಗೆ ಬಂದಿದ್ದ ಈತನ ತಾತ ವಾಹನ ಚಾಲಕರಾಗಿದ್ದು ಹೊಸ ವಾಹನಗಳನ್ನು ಕೇರಳಕ್ಕೆ ತಲುಪಿಸುತ್ತಿದ್ದರು.ಅದೇ ರೀತಿ ಹೊಸ ವಾಹನವನ್ನು ಕೇರಳಕ್ಕೆ ತೆಗೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ಸಹೋದರ ಸೇರಿ ಒಟ್ಟು 7 ಜನರನ್ನು ಕರೆದುಕೊಂಡು ಪ್ರವಾಸಕ್ಕೆ ಹೊರಟಿದ್ದರು. ಕೇರಳ ತಲುಪಿದ ಬಳಿಕ ರೈಲಿನಲ್ಲಿ ಕನ್ಯಾಕುಮಾರಿ ತೆರಳುವವರಿದ್ದರು. ಆದರೆ ದಾರಿ ಮಧ್ಯ ಈ ರೀತಿ ಘಟನೆ ಸಂಭವಿಸಿದೆ. ನದಿಯಲ್ಲಿ ಭಾರೀ ಆಳ ಇರುವ ಕಾರಣ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸುಮಾರು ಒಂದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಶವವನ್ನು ನೀರಿನಿಂದ ಮೇಲಕ್ಕೆತ್ತಿದರು.










