ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಇ-ಕಾಮರ್ಸ್ ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ ಹಾಗೂ ಝೊಮ್ಯಾಟೊ ವಿಧಿಸುತ್ತಿರುವ ಅತಿಯಾದ ಕಮಿಷನ್, ಅಸಮರ್ಪಕ ಪಾವತಿ ವ್ಯವಸ್ಥೆ ಹಾಗೂ ಪೂರ್ವ ಮಾಹಿತಿ ನೀಡದೆ ಏಕಾಏಕಿ ಪಾವತಿಯಲ್ಲಿ ಕಡಿತ ಮಾಡುತ್ತಿರುವ ಕ್ರಮದಿಂದ ಹೋಟೆಲ್ ಉದ್ಯಮಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯಿಂದ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲದೆ, ಇ-ಕಾಮರ್ಸ್ ಸೇವೆಗಳ ಮೂಲಕ ಆಹಾರವನ್ನು ಆರ್ಡರ್ ಮಾಡುವ ಗ್ರಾಹಕರ ಮೇಲೆಯೂ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಈ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ರೂಪಿಸುವ ಉದ್ದೇಶದಿಂದ ಬೆಂಗಳೂರು ಹೋಟೆಲ್ ಉದ್ಯಮಿಗಳ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಯು ರಾಜಾಜಿನಗರದ ಸ್ವಾತಿ ಹೋಟೆಲ್‌ನಲ್ಲಿ ನಡೆಯಲಿದ್ದು, ಹೋಟೆಲ್ ಉದ್ಯಮಿಗಳು, ಹಿತೈಷಿಗಳು ಹಾಗೂ ಸಂಬಂಧಿತ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೊಟೇಲ್ ಉದ್ಯಮಿಗಳಾದ ನವೀನ್ ಶೆಟ್ಟಿ ಐರ್‌ಬೈಲು, ಅಜಿತ್ ಶೆಟ್ಟಿ ಕಿರಾಡಿ ಹಾಗೂ ಹರೀಶ್ ಶೆಟ್ಟಿ ಅರೆಶಿರೂರು ಮನವಿ ಮಾಡಿದ್ದಾರೆ.











