ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಭಾರತದ ಬೃಹತ್ ಉದ್ಯೋಗ ಮೇಳವಾಗಿರುವ ಆಳ್ವಾಸ್ ಪ್ರಗತಿ-2026ರ 16ನೇ ಆವೃತ್ತಿಯು ಶನಿವಾರ ವಿದ್ಯಾಗಿರಿ ಆವರಣದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.
ಭಾಗವಹಿಸಿದ 326 ಕಂಪೆನಿಗಳ ಪೈಕಿ 285 ಕಂಪೆನಿಗಳು 2,394 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಉದ್ಯೋಗಾವಕಾಶ ನೀಡಿದರೆ, 5,935 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್ಲಿಸ್ಟ್ ಮಾಡಿವೆ.

ಮೊದಲ ದಿನ 326 ಕಂಪೆನಿಗಳು ಹಾಗೂ ಎರಡನೇ ದಿನ 6 ಕಂಪೆನಿಗಳು ಸೇರಿದಂತೆ ಒಟ್ಟು 332 ಕಂಪೆನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ದೇಶದ ವಿವಿಧ ಭಾಗಗಳಿಂದ ಒಟ್ಟು 15,539 ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು. ಎರಡನೇ ದಿನವೊಂದರಲ್ಲೇ 2,523 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಎಂಜಿನಿಯರ್‌ಗಳಿಗೆ ಹೆಚ್ಚಿನ ಅವಕಾಶ:
ವಿದ್ಯುತ್ ವಾಹನಗಳ ಚಾರ್ಜಿಂಗ್ ಪರಿಹಾರಗಳನ್ನು ಒದಗಿಸುವ ಪ್ರಮುಖ ಕಂಪೆನಿಯಾದ ಎಕ್ಸಿಕೋಮ್ ಟೆಲಿ ಸಿಸ್ಟಮ್ ಲಿಮಿಟೆಡ್ ತನ್ನ ಹೈದರಾಬಾದ್ ಘಟಕಕ್ಕೆ ಆಳ್ವಾಸ್ ಪ್ರಗತಿ ಮೂಲಕ 35 ಮಹಿಳಾ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿದೆ. ಕಳೆದ ವರ್ಷ ಇದೇ ಮೇಳದ ಮೂಲಕ 22 ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗಿತ್ತು.
ಟಾಟಾ, ಮಹೀಂದ್ರಾ, ಎಂಜಿ, ಹ್ಯುಂಡೈ ಮತ್ತು ಬಿವೈಡಿ ಕಂಪೆನಿಗಳಿಗೆ ಇವಿ ಚಾರ್ಜಿಂಗ್ ಪರಿಹಾರಗಳನ್ನು ಒದಗಿಸುವ ಎಕ್ಸಿಕೋಮ್‌ನಲ್ಲಿ ಒಂಬತ್ತು ರಾಜ್ಯಗಳಲ್ಲಿ ಸುಮಾರು 950 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ಉದ್ಯೋಗಿಗಳ ಪೈಕಿ ಮಹಿಳೆಯರ ಪ್ರಮಾಣವನ್ನು 90%ಕ್ಕೆ ಹೆಚ್ಚಿಸುವ ಗುರಿಯನ್ನು ಕಂಪೆನಿ ಹೊಂದಿದೆ ಎಂದು ಎಕ್ಸಿಕೋಮ್ ಟೆಲಿ ಸಿಸ್ಟಮ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಪೂಜಾ ದುಗ್ಗಲ್ ತಿಳಿಸಿದ್ದಾರೆ.
ಮಹಿಳಾ ಎಂಜಿನಿಯರ್‌ಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ, ಉದ್ಯೋಗ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಕಂಪೆನಿ ಬದ್ಧವಾಗಿದೆ ಎಂದು ಅವರು ಹೇಳಿದರು.
ವಿವಿಧ ಕಂಪೆನಿಗಳಿಂದ ನೇಮಕಾತಿ:
Ø ಮಕ್ಕಳಿಗೆ ತಂತ್ರಜ್ಞಾನ ಮತ್ತು ಕೋಡಿಂಗ್ ಶಿಕ್ಷಣ ಒದಗಿಸುವ ಆನ್‌ಲೈನ್ ಶಿಕ್ಷಣ ವೇದಿಕೆಯಾದ ಕೋಡಯಂಗ್ ನಾಲ್ವರು ಅಭ್ಯರ್ಥಿಗಳನ್ನು ₹8.36 ಲಕ್ಷ ವಾರ್ಷಿಕ ವೇತನ ಪ್ಯಾಕೇಜ್‌ಗೆ ಆಯ್ಕೆ ಮಾಡಿಕೊಂಡಿದೆ.
Ø ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಪರಿಹಾರಗಳನ್ನು ಒದಗಿಸುವ ಜಾಗತಿಕ ಕಂಪೆನಿಯಾದ ಇಎಕ್ಸ್ಎಲ್ 38 ಅಭ್ಯರ್ಥಿಗಳನ್ನು ₹3 ಲಕ್ಷ ವಾರ್ಷಿಕ ವೇತನ ಪ್ಯಾಕೇಜ್‌ಗೆ ಆಯ್ಕೆ ಮಾಡಿಕೊಂಡಿದೆ.
Ø ಎಚ್‌ಎಲ್ ಮಾಂಡೋ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಆಟೋಮೊಬೈಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳ 99 ಇಂಜಿನಿಯರಿಂಗ್ ಅಭ್ಯರ್ಥಿಗಳನ್ನು ಚೆನ್ನೈನಲ್ಲಿ ಕಾರ್ಯನಿರ್ವಹಿಸುವ ಹುದ್ದೆಗಳಿಗೆ ವಾರ್ಷಿಕ ₹3.4 ಲಕ್ಷ ವೇತನದ ಪ್ಯಾಕೇಜ್ ನೀಡಲಿದೆ.
Ø ಎಎನ್‌ಝೆಡ್ ಕಂಪೆನಿ ಅನುಭವಿ ವೃತ್ತಿಪರರು ಹಾಗೂ ಎಂಬಿಎ ಹಾಗೂ ಬಿಕಾಂ ಪದವೀಧರರು ಸೇರಿದಂತೆ 84 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದು, ಆಯ್ಕೆಯಾದವರಿಗೆ ₹3 ಲಕ್ಷದಿಂದ ₹4 ಲಕ್ಷದವರೆಗೆ ವಾರ್ಷಿಕ ವೇತನ ಪ್ಯಾಕೇಜ್ ಘೋಷಿಸಿದೆ
Ø ಟಾಟಾ ಎಲೆಕ್ಟ್ರಾನಿಕ್ಸ್ 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಆಯ್ಕೆಯಾದವರಲ್ಲಿ ಮಹಿಳಾ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Ø ಆರೋಗ್ಯ ಕ್ಷೇತ್ರದ ಸೆಜಿಲಿಟಿ ಕಂಪೆನಿಯು 65 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದು, ಈ ಹುದ್ದೆಗಳಿಗೆ ₹2.9 ಲಕ್ಷದಿಂದ ₹3.4 ಲಕ್ಷದವರೆಗೆ ವಾರ್ಷಿಕ ವೇತನ ಪ್ಯಾಕೇಜ್ ನೀಡುತ್ತದೆ.
Ø ಫೈಎಸ್ ಡಿಜಿಟಲ್ ವಿವಿಧ ಹುದ್ದೆಗಳಿಗೆ 32 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ.
Ø ಸೌದಿ ಅರೇಬಿಯಾ ಹಾಗೂ ಮಧ್ಯಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಕೈಗಾರಿಕಾ ಸಮೂಹವಾದ ಎಕ್ಸ್ಪರ್ಟೀಸ್ ಕಂಪೆನಿಯು ಗಲ್ಫ್ ದೇಶದ ಅವಕಾಶಕ್ಕೆ ಹಾಗೂ ಅದಾನಿ ಮುಂದ್ರಾ ಯೋಜನೆಗಾಗಿ 116 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿಕೊಂಡಿದೆ
Ø ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಎಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋ ದೇಶಕ್ಕಾಗಿ ಒಬ್ಬ ಅಭ್ಯರ್ಥಿಯನ್ನು ಉತ್ತಮ ವೇತನದೊಂದಿಗೆ ಆಯ್ಕೆ ಮಾಡಿಕೊಂಡಿದೆ.
Ø ಬುಲ್ಹರ್ ಕಂಪೆನಿಯು ಕೃಷಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಬಿ.ಇ. ವಿಭಾಗಗಳಿಂದ 14 ಅಭ್ಯರ್ಥಿಗಳನ್ನು ವಾರ್ಷಿಕ ₹3 ಲಕ್ಷ ವೇತನ ಪ್ಯಾಕೇಜ್‌ಗೆ ಆಯ್ಕೆ ಮಾಡಿಕೊಂಡಿದೆ.
Ø ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿಯು 20 ಇಂಜಿನಿಯರಿಂಗ್ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದು, ಅವರಿಗೆ ₹6 ಲಕ್ಷ ವಾರ್ಷಿಕ ವೇತನ ಪ್ಯಾಕೇಜ್ ನೀಡುವ ಹುದ್ದೆಗಳಿಗೆ ಪರಿಗಣಿಸಲಾಗಿದೆ.
ಶ್ವೇತಾಗೆ ಹೊಸ ವೃತ್ತಿಜೀವನದ ಅವಕಾಶ:
ಸುಳ್ಯದ ಕಲ್ಲಗುಂಡಿ ಮೂಲದ ಶ್ವೇತಾ, ಕೊಡ್ಯಾಲ್‌ಬೈಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ಪದವೀಧರೆಯಾಗಿದ್ದು, ಕಳೆದ ವರ್ಷ ಪದವಿ ಪೂರ್ಣಗೊಳಿಸಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ವೃತ್ತಿ ಅವಕಾಶಕ್ಕಾಗಿ ಉದ್ಯೋಗ ಬದಲಾವಣೆಯನ್ನು ಎದುರು ನೋಡುತ್ತಿದ್ದರು. ಈ ಸಂದರ್ಭದಲ್ಲಿ ಆಳ್ವಾಸ್ ಪ್ರಗತಿ-2026 ಅವರಿಗೆ ಹೊಸ ಅವಕಾಶದ ವೇದಿಕೆಯಾಯಿತು. ಮೇಳದಲ್ಲಿ ಅವರು ಟಾಟಾ ಇಲೆಕ್ಟಾçನಿಕ್ಸ್ ಸಿಸ್ಟಮ್ ಸೊಲೂಷನ್ಸ್ಗೆ ಆಯ್ಕೆಯಾಗಿದ್ದು, ಉತ್ತಮ ವೃತ್ತಿಜೀವನದ ಅವಕಾಶ ಕಲ್ಪಿಸಿದ ಆಳ್ವಾಸ್ ಪ್ರಗತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆಯ್ಕೆ ಮತ್ತು ಶಾರ್ಟ್ಲಿಸ್ಟ್ ಮಾಹಿತಿ ವೆಬ್‌ಸೈಟ್‌ನಲ್ಲಿ:
ಆಳ್ವಾಸ್ ಪ್ರಗತಿ-2026ರಲ್ಲಿ ವಿವಿಧ ಕಂಪೆನಿಗಳಿಂದ ನಡೆದ ಅಭ್ಯರ್ಥಿಗಳ ಆಯ್ಕೆ ಹಾಗೂ ಶಾರ್ಟ್ಲಿಸ್ಟ್ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಒಂದು ವಾರದೊಳಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು www.alvaspragati.com ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಆಯ್ಕೆ, ಶಾರ್ಟ್ಲಿಸ್ಟ್ ವಿವರಗಳು ಹಾಗೂ ಭಾಗವಹಿಸಿದ ಕಂಪೆನಿಗಳಿಂದ ದೊರೆಯುವ ಮುಂದಿನ ಹಂತದ ಮಾಹಿತಿಯನ್ನು ಪರಿಶೀಲಿಸುವಂತೆ ಕೋರಲಾಗಿದೆ. ಇದರ ಜೊತೆಯಲ್ಲಿ ಆಳ್ವಾಸ್ ಪ್ರಗತಿ ತಂಡದಿಂದ ಆಯ್ಕೆ ಹಾಗೂ ಶಾರ್ಟಲಿಸ್ಟ್ಗೊಂಡ ಅಭ್ಯರ್ಥಿಗಳಿಗೆ ವೈಯಕ್ತಿಕ ಎಸ್‌ಎಮ್‌ಎಸ್ ತಲುಪಲಿದೆ.
















