ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮೂಲನಿವಾಸಿಗಳ ದೈನಂದಿನ ಜೀವನಕ್ಕೆ ಆಸರೆಯಾಗುವ ಉದ್ದೇಶದಿಂದ ಮತ್ತು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಈ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರೋಟರಿ ಕ್ಲಬ್ ಗಂಗೊಳ್ಳಿ ಇದರ ಅಧ್ಯಕ್ಷೆ ಮಾಲಾಶ್ರೀ ಖಾರ್ವಿ ಹೇಳಿದರು.
ಅವರು ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನದ ಅಂಗವಾಗಿ ಸ್ಥಳೀಯ ಬಡ ಮೂಲನಿವಾಸಿ ಕುಟುಂಬಕ್ಕೆ ಅಗತ್ಯ ದಿನಬಳಕೆಯ ಆಹಾರ ಧಾನ್ಯಗಳ ಕಿಟ್ ಹಾಗೂ ಆರ್ಥಿಕ ಧನಸಹಾಯವನ್ನು ವಿತರಿಸಿ ಮಾತನಾಡಿದರು.
ಗಂಗೊಳ್ಳಿ ರೋಟರಿಯ ಸದಸ್ಯ ಉಮೇಶ್ ಮೇಸ್ತ, ಪ್ರದೀಪ ಡಿ. ಕೆ., ಚಂದ್ರಕಲಾ ತಾಂಡೇಲ, ನಿವೃತ್ತ ಶಿಕ್ಷಕ ದೇವು ಎಚ್., ರೋಟರಿ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.











