ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದಿವಂಗತ ನಾಗರಾಜ ಹಂದೆ ಅವರು ಬಹಳಷ್ಟು ಕಾಲ ಸಾಲಿಗ್ರಾಮ ದೇಗುಲದಲ್ಲಿ ಮ್ಯಾನೆಜರ್ ಆಗಿ ದುಡಿದವರು. ಕಲಾಸಕ್ತಿಯಿಂದ ಹೆಚ್ಚು ಕಲಾ ತಂಡಗಳಿಗೆ ಸ್ಪೂರ್ತಿಯಾಗಿ ಕಾರ್ಯಕ್ರಮ ನೆರವೇರಿಸಿಕೊಡುವಲ್ಲಿ ಶ್ರಮಿಸಿದವರು. ಕಲಾ ತಂಡಗಳನ್ನು ಆಹ್ವಾನಿಸಿಕೊಂಡು ವಿಶೇಷ ಆಹ್ವಾನವೀಯುತ್ತಾ ಅತಿಥಿ ಸತ್ಕಾರದಿಂದ ಮನ ಗೆದ್ದವರು. ಅವರಿಲ್ಲ ಎಂಬುದು ಅತ್ಯಂತ ನೋವು ತಂದಿದೆ ಎಂದು ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ ಹೇಳಿದರು.
ಅವರು ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಆಯೋಜಿಸಿಕೊಂಡ ’ಅರ್ಥಾಂಕುರ-27’ರಲ್ಲಿ ’ನಾಗರಾಜ ಹಂದೆ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಕೆ. ತಾರಾನಾಥ ಹೊಳ್ಳ ಮಾತನ್ನಾಡಿದರು.
ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ ಮಾತನಾಡಿ, ಕುಟುಂಬದ ಸದಸ್ಯನಂತೆ ದೇಗುಲದ ಏಳ್ಗೆಗಾಗಿ ಶ್ರಮಿಸಿದ ನಾಗರಾಜ ಹಂದೆಯವರ ಅಕಾಲ ಮರಣ ಮನಸ್ಸಿಗೆ ಬೇಸರ ತಂದಿದೆ ಎಂದರು. ಮೃತರ ಸಹೋದರ ಭಾಸ್ಕರ ಹಂದೆ ಮಾತನ್ನಾಡಿ ಅನವರತವೂ ದೇಗುಲದ ಸಮಸ್ತ ಏಳ್ಗೆಗೆ ಶ್ರಮಿಸಿದ ಸಹೋದರನ ಸಾವಿನ ಬಾಧೆಯನ್ನು ತೋಡಿಕೊಂಡರು. ದೇಗುಲದ ಮ್ಯಾನೇಜರ್ ಗಣೇಶ್ ಭಟ್, ಹಿರಿಯ ಭಾಗವತ ಕರ್ಜೆ ಶ್ರೀಧರ ಹೆಬ್ಬಾರ್, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.
ಡಾ. ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ತೆಂಕುತಿಟ್ಟಿನ ಹಿಮ್ಮೇಳದೊಂದಿಗೆ ’ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ರಂಗ ಪ್ರಸ್ತುತಿಗೊಂಡಿತು.
















