ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯ ನದಿ-ಕಡಲು ನಡುವಿನ, ಹೆದ್ದಾರಿ ಅಂಚಿನ ಮಾರಸ್ವಾಮಿಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಬುಧವಾರ ಸಂಪನ್ನಗೊಂಡಿತು.

ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.


ಒಂದೆಡೆ ಸಮುದ್ರ, ಇನ್ನೊಂದೆಡೆ ನದಿ, ನಡುವೆ ಹಾದು ಹೋಗುವ ಹೆದ್ದಾರಿ ಕಾರಣದಿಂದ ತೀರ ಕಿರಿದಾದ ಭೂಪ್ರದೇಶದ ಇಲ್ಲಿ ಅಮಾವಾಸ್ಯೆಯ ಪರ್ವದಲ್ಲಿ ಪಾಲ್ಗೊಳ್ಳಲು ಬರುವ ಸಹಸ್ರಾರು ಭಕ್ತರ ಸುರಕ್ಷತೆಗಾಗಿ ಮತ್ತು ಹೆದ್ದಾರಿಯಲ್ಲಿ ಎಡೆಬಿಡದೆ ಸಂಚರಿಸುವ ವಾಹನಗಳ ಜತೆಗೆ ಜಾತ್ರೆಗೆ ಬರುವ ಅಸಂಖ್ಯ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಜನದಟ್ಟಣೆಯ ನಿಯಂತ್ರಣ, ಸಮುದ್ರ ಮತ್ತು ನದಿಸ್ನಾನ ಮಾಡುವವರ ಬಗೆಗೆ ವಹಿಸಬೇಕಾದ ಎಚ್ಚರದ ಕುರಿತು ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಸಂಚಾರಿ ಪೋಲಿಸರು ಅಗತ್ಯ ಕ್ರಮಕೈಗೊಂಡಿದ್ದರು.
ಇದನ್ನೂ ಓದಿ ► ಪಡುವರಿ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಸಂಪನ್ನ – https://kundapraa.com/?p=100763 .
















