ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಗೊಂಬೆ ನಡಿಗೆ ವಿದ್ಯಾರ್ಥಿಯ ಕಡೆಗೆ ಸೂತ್ರ ಸಂಕಲ್ಪ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.
ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಭಾಗವತ ಹಾಗೂ ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ ಅವರು ಸೂತ್ರ ಸಂಕಲ್ಪ ಉದ್ಘಾಟಿಸಿದರು.
ವೇದಿಕೆಯಲ್ಲಿ ಸುರೇಶ್ ಮರಕಾಲ, ರಮೇಶ್ ಭಟ್ ಕೋಟೇಶ್ವರ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮೇಶ್ ಸುವರ್ಣ ಅವರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ನಂತರ ಸೂತ್ರ ಸಂಕಲ್ಪದಡಿ ವಿದ್ಯಾರ್ಥಿಗಳಿಗೆ ಗುರುದೀಕ್ಷೆ ಹಾಗೂ ಗೊಂಬೆಯಾಟದ ತರಬೇತಿ ನೀಡಲಾಯಿತು. ಅಧ್ಯಾಪಕರು, ಹಿರಿಯರು ಕಿರಿಯರೆಂಬ ಬೇಧವಿಲ್ಲದೆ ಎಲ್ಲರೂ ಸೇರಿ ಸೂತ್ರ ಸಂಕಲ್ಪಕ್ಕೆ ಚಾಲನೆ ನೀಡಿದರು. ಎಲ್ಲರೂ ಗೊಂಬೆಯೊಟ್ಟಿಗೆ ಸೇರಿ ಕುಣಿದು ಖುಷಿ ಪಟ್ಟರು.
ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಶ್ಯಾನುಭಾಗ್ ಅವರು ನಿರೂಪಿಸಿ, ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ವಂದಿಸಿದರು. ರಾಜೇಂದ್ರ ಪೈ ಸಹಕರಿಸಿದರು.
















