ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ವತಿಯಿಂದ ದೇಶದ ಗಡಿಯನ್ನು ಕಾಯುವ ಯೋಧರ ತ್ಯಾಗ, ಸೇವೆ ಹಾಗೂ ದೇಶಪ್ರೇಮವನ್ನು ಸ್ಮರಿಸಿ ಗೌರವಿಸುವ ಉದ್ದೇಶದಿಂದ “ಯೋಧರಿಗೆ ಗೌರವಾರ್ಪಣೆ” ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ದೇಶದ ಗಡಿಭಾಗದಲ್ಲಿ 24 ವರ್ಷಗಳ ಕಾಲ ಸುದೀರ್ಘ ಹಾಗೂ ಅಮೂಲ್ಯ ಸೇವೆ ಸಲ್ಲಿಸಿದ ವಿಶ್ವನಾಥ್ ಹಂದೆ ಅವರನ್ನು ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದೇಶದ ಭದ್ರತೆಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮರ್ಪಿಸಿ, ಕುಟುಂಬದಿಂದ ದೂರವಿದ್ದು ದೇಶಸೇವೆಯನ್ನು ಕರ್ತವ್ಯವೆಂದು ನಿರ್ವಹಿಸಿದ ವಿಶ್ವನಾಥ್ ಹಂದೆ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಹಾಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಅವರ ದೇಶಸೇವೆಯ ಜೊತೆಗೆ, ತಮ್ಮ ಮರಣಾನಂತರ ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಲು ಅವರು ಕೈಗೊಂಡಿರುವ ನಿರ್ಧಾರವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದೆ. ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಭವಿಷ್ಯದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ತಮ್ಮ ದೇಹವನ್ನು ದಾನ ಮಾಡುವ ಮೂಲಕವೂ ಸಮಾಜಕ್ಕೆ ಕೊಡುಗೆ ನೀಡುವ ಅವರ ಉದಾತ್ತ ಮನೋಭಾವವು ಎಲ್ಲರಿಗೂ ಮಾದರಿಯಾಗಿದೆ.
ದೇಶದ ಗಡಿಯನ್ನು ಕಾಯುವ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಯೋಧರೊಬ್ಬರು, ತಮ್ಮ ಜೀವನದ ಅಂತಿಮ ಹಂತದಲ್ಲಿಯೂ ಸಮಾಜದ ಒಳಿತಿಗಾಗಿ ದೇಹದಾನ ಮಾಡುವ ಸಂಕಲ್ಪ ಕೈಗೊಂಡಿರುವುದು ಅವರ ಸೇವಾ ಮನೋಭಾವದ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಇಂತಹ ಅಪೂರ್ವ ಸೇವೆ ಹಾಗೂ ಮಾನವೀಯತೆಗೆ ಗೌರವ ಸೂಚಿಸುವುದು ಸಂಘಟನೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ವಿಶ್ವನಾಥ್ ಹಂದೆ ಅವರನ್ನು ಗೌರವಿಸಿ, ಅವರ ದೇಶಸೇವೆ ಹಾಗೂ ಸಮಾಜಮುಖಿ ಚಿಂತನೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ಹರಪನಕೆರೆ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರು ಹಾಗೂ ಕೋಟೇಶ್ವರ ಘಟಕದ ಉಸ್ತುವಾರಿಗಳಾದ ಅಶೋಕ್ ತೆಕ್ಕಟ್ಟೆ, ಗೌರವಾಧ್ಯಕ್ಷರಾದ ಆನಂದ್ ಕುಂದರ್, ಹಳ ಅಳಿವೆ, ಮಾಜಿ ಕಾರ್ಯದರ್ಶಿಗಳಾದ ಪುಂಡಲಿಕ ಮೊಗವೀರ ಹಾಗೂ ರಾಘವೇಂದ್ರ ವಿ. ಮೆಂಡನ್, ಗೌರವಾನ್ವಿತರಾದ ರಾಜು ಮೊಗವೀರ ಕುಂಭಾಶಿ ಹಾಗೂ ಟಿ.ಆರ್. ಮಂಜುನಾಥ್ ಕೊಮೆ, ಗುರಿಕಾರರಾದ ರಾಜು ಮೊಗವೀರ ಹಳಅಳಿವೆ ಹಾಗೂ ರಾಮನಾಯಕ್ ಬೀಜಾಡಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಘಟಕದ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಅಂತಿಮವಾಗಿ ವಂದನಾರ್ಪಣೆ ಸಲ್ಲಿಸಿದರು.
















