ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 6.0” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ನಡೆದ 13 ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ಬ್ಲಾಕ್ ಪ್ರಾಗ್ ನ ಉಪಾಧ್ಯಕ್ಷರಾದ ಅಭಿಜಿತ್ ಅಡಿಗ ಅವರು ಮಾತನಾಡಿ, ಎಐ ಟೆಕ್ನಾಲಜಿಯು ನಮ್ಮ ಜ್ಞಾನಕ್ಕೆ ಶಕ್ತಿ ಮದ್ದಿನಂತೆ ಕೆಲಸಮಾಡುತ್ತಿದ್ದು ನಾವೆಲ್ಲರೂ ಅದನ್ನು ಸದುಪಯೋಗಪಡಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಂಡು ಕಾರ್ಯ ನಿರ್ವಹಿಸಿದರೆ ಮಾತ್ರ ಈ ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ಸಾಧ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಉಡುಪಿಯ ಜ್ಞಾನಸುಧಾ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಿಧಿ ಭಾಗವತ್ ರವರು ಮಾತನಾಡಿ, ವರ್ತಮಾನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ನೀಡಿ ಅಭಿನಂದಿಸಿದರು.
ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ , ವಿದ್ಯಾರ್ಥಿ ಪ್ರತಿನಿಧಿಗಳಾದ ಗಣೇಶ್ ಕೆ. ಮತ್ತು ಅಪೂರ್ವ ದೇವಾಡಿಗ ಉಪಸ್ಥಿತರಿದ್ದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಸಿ.ಎ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಟೆಕ್ ಮಂಥನ್ 6.0 ಕಾರ್ಯಕ್ರಮದಲ್ಲಿ ದ್ವಿತೀಯ ಬಿಸಿಎ (ಸಿ) ವಿಭಾಗವು ಸಮಗ್ರ ಪ್ರಶಸ್ತಿ ಪಡೆಯಿತು. ದ್ವಿತೀಯ ಬಿಸಿಎ(ಎ) ವಿಭಾಗ ಸಮಗ್ರ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿತು.
ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮಹೇಶ್ ಪೂಜಾರಿ ಹಾಗೂ ಶ್ರೀಮತಿ ವಿಲ್ಮಾ ಶೆರಲ್ ಅತಿಥಿಗಳನ್ನು ಪರಿಚಯಿಸಿದರು. ವಿಭಾಗದ ಪ್ರಾಧ್ಯಾಪಕರಾದ ಪ್ರಣಮ್ ಆರ್. ವಿಜೇತರ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮದ ಸಂಯೋಜಕರಾದ ನಿರ್ಮಲಾ ಬಿ. ಸ್ವಾಗತಿಸಿದರು. ಗಿರಿರಾಜ್ ಭಟ್ ವಂದಿಸಿದರು. ಪ್ರಾಧ್ಯಾಪಕಿ ರಮ್ಯಾ ಸಿ. ಕಾರ್ಯಕ್ರಮವನ್ನು ನಿರೂಪಿಸಿದರು.
















