ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ , ವೃತ್ತಿ ಮಾರ್ಗದರ್ಶನ ಮತ್ತು ಪ್ಲೇಸ್ ಮೆಂಟ್ ಕೋಶ ಮತ್ತು ಬೆಂಗಳೂರಿನ ಮ್ಯಾಜಿಕ್ ಬಸ್ ಇವರ ಸಹಯೋಗದಲ್ಲಿ ನಡೆದ 4ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದಾಗ ಉದ್ಯೋಗ ಪಡೆಯುವಲ್ಲಿ ಹೆಚ್ಚಿನ ಅವಕಾಶಗಳು ನಿಮಗಾಗಿ ಸೃಷ್ಟಿಯಾಗುತ್ತದೆ. ಇಂತಹ ತರಬೇತಿ ಕಾರ್ಯಕ್ರಮಗಳು ನಿಮ್ಮ ಕೌಶಲ್ಯ ಹೆಚ್ಚಿಸಲು ಅನುಕೂಲವಾಗುತ್ತವೆ ಎಂದು ಹೇಳಿದರು.
ಮ್ಯಾಜಿಕ್ ಬಸ್ ಇದರ ಮಾಹಿತಿ ತಂತ್ರಜ್ಞಾನ ತರಬೇತುದಾರರಾದ ಶಕ್ತಿ ಅವರು ಮಾತನಾಡಿ ಮೊದಲು ನಿಮ್ಮಲ್ಲಿ ಇರುವಂತಹ ವೈಶಿಷ್ಟ್ಯಪೂರ್ಣ ಕೌಶಲ್ಯ ಮತ್ತು ಪ್ರತಿಭೆ ಅರಿತು ಅದಕ್ಕೆ ಪೂರಕವಾಗಿ ತರಬೇತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮ್ಯಾಜಿಕ್ ಬಸ್ ಇದರ ಕಾರ್ಯಕ್ರಮ ಸಂಯೋಜಕ ಮಧುಸೂಧನ, ಸಾಫ್ಟ್ ಸ್ಕಿಲ್ ತರಬೇತುದಾರರಾದ ಸಿಂಧು ಕವಿ, ಕವಿತಾ , ಮಾಹಿತಿ ತಂತ್ರಜ್ಞಾನ ತರಬೇತುದಾರಾದ ವಿಶಾಲ್ ಮತ್ತು ವಿಜೇಶ್, ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ಸಂಘದ ಸಂಯೋಜಕಿ ಮಮತಾ, ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಂಜನ್ ಕುಮಾರ್ ಎ.ಎಲ್. ಉಪಸ್ಥಿತರಿದ್ದರು.
ವೃತ್ತಿ ಮಾರ್ಗದರ್ಶನ ಮತ್ತು ಪ್ಲೇಸ್ ಮೆಂಟ್ ಕೋಶ ಇದರ ಸಂಯೋಜಕರಾದ ರಾಜೇಂದ್ರ ಹೋಬಳಿದಾರ್ ಅವರು ವಂದಿಸಿದರು. ವಿದ್ಯಾರ್ಥಿಗಳಾದ ವರ್ಷಾ ಖಾರ್ವಿ, ಕೀರ್ತನ .ಬಿ.ಶೆಟ್ಟಿ, ಶಿವರಾಜ್, ಶಿವಾನಿ ಬಿಲ್ಲವ, ಸಂಜನಾ, ಮತ್ತು ಶಹಜೀನ್ ಅನಿಸಿಕೆ ವ್ಯಕ್ತಪಡಿಸಿದರು. ಕೃತಿ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಜೋಗಿ ಸ್ವಾಗತಿಸಿದರು .
















