ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಂಧುತ್ವದ ಚಿಗುರೊಡೆಯಲು ಕಾರಣವಾದ ಬಹುಮುಖ್ಯವಾದ ಪವಿತ್ರವಾದ ಸಾಂಸ್ಕೃತಿಕ ಹಬ್ಬ ರಕ್ಷಾ ಬಂಧನ. ಪರಸ್ಪರ ಆಶ್ವಾಸನೆ, ವಿಶ್ವಾಸವನ್ನು ನೀಡುವ ಹಬ್ಬವೇ ರಕ್ಷಾಬಂಧನ. ರಕ್ಷಾ ಬಂಧನ ಕೇವಲ ಸಹೋದರ ಸಹೋದರಿಯರ ನಡುವೆ ಮಾತ್ರ ನಡೆಯುವ ಹಬ್ಬ ಅಲ್ಲ. ಜಾತಿ, ಮತ, ಧರ್ಮಗಳ ನಡುವೆ ಸ್ನೇಹಪೂರ್ವಕ ಸಂಕೇತವಾಗಿಯೂ ರಕ್ಷಾ ಬಂಧನ ಮಹತ್ವವನ್ನು ಪಡೆದುಕೊಂಡಿದೆ ಎಂದು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ದಿವ್ಯಶ್ರೀ ರಾಘವೇಂದ್ರ ಹೇಳಿದರು.

ಅವರು ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇದರ ಸಹಯೋಗದೊಂದಿಗೆ ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಶನಿವಾರ ಜರಗಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದರು.
ಎಲ್ಲರಲ್ಲಿಯೂ ಸಹೋದರತೆಯ ಬಂಧವನ್ನು ಬೆಸೆಯಲು, ಏಕತೆಯನ್ನು ಕಾಣಲು, ರಾಷ್ಟ್ರ ರಕ್ಷಣೆ ಮಾಡಲು ರಕ್ಷಾ ಬಂಧನವನ್ನು ಕಟ್ಟುತ್ತಾರೆ. ರಕ್ಷೆಯನ್ನು ಮನ:ಪೂರ್ವಕವಾಗಿ ಪ್ರೀತಿಯಿಂದ ಕಟ್ಟಿದರೆ ರಕ್ಷಣೆ ಸಿಗುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಹಣದ ಶ್ರೀಮಂತಿಕೆ ಬೇಕಿಲ್ಲ, ಆಡಂಬರ ಬೇಕಿಲ್ಲ, ಉಡುಗೊರೆಯೂ ಮುಖ್ಯವಲ್ಲ. ನಾವೆಲ್ಲರೂ ಪರಸ್ಪರ ಪ್ರೀತಿಯಿಂದ ಒಬ್ಬರನ್ನೊಬ್ಬರು ರಕ್ಷಿಸೋಣ ಎಂದು ಅವರು ಹೇಳಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಮಾಲಾಶ್ರೀ ಖಾರ್ವಿ ಮತ್ತು ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದೀಕ್ಷಿತ್ ಮೇಸ್ತ ಶುಭಾಶಂಸನೆಗೈದರು. ಶಿಶು ಮಂದಿರದ ಸದಸ್ಯರಾದ ಉಷಾ ಪಿ.ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ವಸಂತಿ ಎನ್.ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ಸಹಾಯಕಿ ರತ್ನ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.
















