ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಬೈಂದೂರಿನ ಸೈಂಟ್ ಥಾಮಸ್ ಶಾಲೆಯಲ್ಲಿ ‘ಮುದ್ದು ಕೃಷ್ಣ–ಮುದ್ದು ರಾಧೆ’ವೇಷಭೂಷಣ ಸ್ಪರ್ಧೆಯನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮವು ಮಕ್ಕಳ ಸೃಜನಶೀಲತೆ, ಪ್ರತಿಭೆ ಹಾಗೂ ಭಾರತೀಯ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉದಯವಾಣಿ ಪತ್ರಿಕೆಯ ವರದಿಗಾರರು, ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಘಟಕದ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ಬೈಂದೂರಿನ ಅಧ್ಯಕ್ಷರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನರ್ಸರಿಯಿಂದ ಪ್ರೀ-ಪ್ರೈಮರಿ, 1ನೇ ಮತ್ತು 2ನೇ ತರಗತಿ ಹಾಗೂ 3ನೇಯಿಂದ 5ನೇ ತರಗತಿಯವರೆಗೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಕಂಗೊಳಿಸಿದರು. ಮುದ್ದಾದ ಕೃಷ್ಣನ ವೇಷದಲ್ಲಿ ಕೊಳಲು ಹಿಡಿದು ಬಂದ ಪುಟಾಣಿ ಮಕ್ಕಳು ಹಾಗೂ ರಾಧೆಯ ವೇಷದಲ್ಲಿ ಮಿಂಚಿದ ಬಾಲಕಿಯರು ಎಲ್ಲರ ಗಮನ ಸೆಳೆದರು. ಮಕ್ಕಳ ಅಭಿನಯ, ವೇಷಭೂಷಣ ಮತ್ತು ಆತ್ಮವಿಶ್ವಾಸಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
“ಮಕ್ಕಳ ಪ್ರತಿಭೆಗೆ ವೇದಿಕೆ ನೀಡಿದಾಗ ಅವರ ಆತ್ಮವಿಶ್ವಾಸವೂ ಬೆಳೆಯುತ್ತದೆ; ಸಂಸ್ಕೃತಿಯ ಪರಿಚಯವಾದಾಗ ಅವರ ವ್ಯಕ್ತಿತ್ವವೂ ಅರಳುತ್ತದೆ” ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿಬಂತು.
ಭಗವದ್ಗೀತೆಯ ಶ್ರೀಕೃಷ್ಣನ ಸಂದೇಶವಾದ “ಕರ್ಮಣ್ಯೇವಾಧಿಕಾರಸ್ತೇ” ಎಂಬ ತತ್ವವನ್ನು ಸ್ಮರಿಸುತ್ತಾ, ಫಲಿತಾಂಶಕ್ಕಿಂತ ಪ್ರಯತ್ನ ಮತ್ತು ಭಾಗವಹಿಸುವಿಕೆಯೇ ಮುಖ್ಯ ಎಂಬುದನ್ನು ಮಕ್ಕಳಿಗೆ ಪ್ರಾಂಶುಪಾಲರು ಫಿಲಿಪ್ ನೆಲ್ಲಿ ವಿಳಾ ಅವರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ವಿಜೇತರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿಗಳು ಮತ್ತು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಅರುಣ್ ಕುಮಾರ್ ಅವರು, “ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವರ ಭವಿಷ್ಯಕ್ಕೆ ನಾವು ನೀಡುವ ಅತ್ಯುತ್ತಮ ಕೊಡುಗೆ”ಮತ್ತು ಶ್ರೀ ಕೃಷ್ಣನ ಪವಾಡ. ನಾವೆಲ್ಲರೂ ಒಂದೇ ಎಂದು ಹೇಳಿದರು.
ಶಾಲೆಯ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. “ಸಂಸ್ಕೃತಿ ಉಳಿದರೆ ಸಂಸ್ಕಾರ ಉಳಿಯುತ್ತದೆ; ಸಂಸ್ಕಾರ ಉಳಿದರೆ ಸಮಾಜದ ಭವಿಷ್ಯ ಉಜ್ವಲವಾಗುತ್ತದೆ” ಎಂಬ ಆಶಯದೊಂದಿಗೆ, ಸಿಹಿಯನ್ನು ಸವಿಯುದರ ಮೂಲಕ ಕಾರ್ಯಕ್ರಮವು ಸಡಗರದಿಂದ ಸಂಪನ್ನಗೊಂಡಿತು.
ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು ಉಪಪ್ರಾಂಶುಪಾಲರು, ಶಿಕ್ಷಕವೃಂದ, ವಿಧ್ಯಾರ್ಥಿಗಳು, ಪುಟಾಣಿಗಳು , ಪಾಲಕರು ಉಪಸ್ಥಿತರಿದ್ದರು.
















