ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಸಹಕಾರ ವ್ಯವಸ್ಥೆಯಲ್ಲಿ ಮಾದರಿ ಸಂಸ್ಥೆಯಾಗಿ ರೂಪುಗೊಂಡು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವುದು ಸಂತಸದ ಸಂಗತಿಯಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಹೇಳಿದರು.

ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇದರ ಸುವರ್ಣ ಸಂಭ್ರಮಕ್ಕೆ ಚಾಲನೆ ಹಾಗೂ ಸಂಸ್ಥಾಪಕರ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ರಂಗದಲ್ಲಿ ಪ್ರಕಾಶ್ಚಂದ್ರ ಶೆಟ್ಟಿ ಅವರು ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಮರೆತು ಗುರುತಿಸುವ ವ್ಯಕ್ತಿತ್ವದವರಾಗಿದ್ದಾರೆ. ಖಂಬದಕೋಣೆ ಸಹಕಾರಿಯ ಬಲವರ್ಧನೆಯಲ್ಲಿ ಅವರ ಕೊಡುಗೆ ದೊಡ್ಡದಿದೆ ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಷ್ಟದಲ್ಲಿದ್ದ ಸಂಸ್ಥೆಯನ್ನು ಸದಸ್ಯರು, ಸಿಬ್ಬಂದಿಗಳ ನಿರಂತರ ಸಹಕಾರ ಮೂಲಕ ಲಾಭದಾಯಕ ಸಂಸ್ಥೆಯನ್ನಾಗಿ ಮಾಡಲಾಗಿದೆ. ಸಹಕಾರ ವ್ಯವಸ್ಥೆಯಲ್ಲಿ ಸಂಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸಲಾಗಿದೆ. ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ರೈತ ಸಿರಿ ಅಗ್ರಿ ಮಾಲ್ ಯೋಜನೆಯನ್ನು ಇನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಈ ವೇಳೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಂ. ಮಹೇಶ್ ಹೆಗ್ಡೆ ಅವರು ಸುವರ್ಣ ಮಹೋತ್ಸವದ ಲೋಗೋ ಅನಾವರಣಗೊಳಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀಕುಮಾರ್ ಜೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು. ಸಂಘದ ಮಾಜಿ ಆಡಳಿತಾಧಿಕಾರಿ ಅಮೃತ ಹೊಳ್ಳ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಮೋಹನ ಪೂಜಾರಿ ಉಪ್ಪುಂದ, ಗುರುರಾಜ ಹೆಬ್ಬಾರ್, ಭರತ ದೇವಾಡಿಗ, ಹೂವ ನಾಯ್ಕ್, ಪ್ರಕಾಶ್ ಎನ್. ಪೂಜಾರಿ, ರಾಜೇಶ್ ದೇವಾಡಿಗ, ಉದಯಕುಮಾರ್ ಶೆಟ್ಟಿ, ದಿನಿತಾ ಶೆಟ್ಟಿ, ಲೀಲಾ ಪೂಜಾರ್ತಿ, ರಂಜಿತಕುಮಾರ್ ಶೆಟ್ಟಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಧಿಕಾರಿ ವಿಷ್ಣು ಪೈ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಮಂಜು ದೇವಾಡಿಗ ಸ್ವಾಗತಿಸಿದರು. ಸಿಬ್ಬಂದಿ ನಾಗರತ್ನ ಪ್ರಾರ್ಥಿಸಿದರು.
















