ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ಗಂಗಾಧರ ಮಂಜರು ಅವರ ಮನೆಯ ಬೆಡ್ ರೂಮ್‌ನ ಕಪಾಟಿನೊಳಗಿದ್ದ 56 ಗ್ರಾಂ ತೂಕದ 8ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಆ.17ರ ಬೆಳಗ್ಗೆ 10 ರಿಂದ ಸೆ.6ರ ರಾತ್ರಿ 7.30 ರ ಮಧ್ಯದಲ್ಲಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಬೀಗ ಅಳವಡಿಸಿದ ಕಪಾಟಿನಲ್ಲಿದ್ದ 4 ಗ್ರಾಂ ತೂಕದ ಚಿನ್ನದ ಹರಳಿನ ಉಂಗುರ, 2.8 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೇಟ್ 2, ಲಕ್ಷ್ಮೀ ಪೆಂಡೆಂಟ್ ಇರುವ 40 ಗ್ರಾಂ ತೂಕದ ಚಿನ್ನದ ಸರ 1 ಈ ಒಡವೆಗಳನ್ನು ಇಟ್ಟಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆಸಿರುವುದಾಗಿದೆ. ಸೆ.6 ರ ರಾತ್ರಿ ಆಔರಣಗಳನ್ನು ತೆಗೆಯಲು ಹೋದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಗಂಗಾಧರ ಮಂಜರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಎಸ್‌ಐ ನೂತನ್ ಎಸ್., ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.











