ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಿಜೂರು ರೈಲ್ವೆ ನಿಲ್ದಾಣವು ಲೂಪ್ ಲೈನ್ ಸೇರಿದಂತೆ ಎಲ್ಲಾ ಬಗೆಯಲ್ಲಿಯೂ ಸುಸಜ್ಜಿತವಾದ ನಿಲ್ದಾಣವಾಗಿದೆ. ಕಳೆದ 30 ವರ್ಷಗಳಿಂದ ರೈಲ್ವೆ ಯಾತ್ರಿಕರ ಸಂಘ ಹೋರಾಟ ನಡೆಸುತ್ತಿದ್ದರೂ, ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡದೇ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ಕ್ರಾಸಿಂಗ್ ಸ್ಟೇಷನ್ ಆಗಿ ಉಳಿಸಿಕೊಂಡು ಯಾತ್ರಿಕರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಅನ್ಯಾಯವೆಸಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಿರಂತರ ಮನವಿ ಮಾಡಿದ ಹೊರತಾಗಿಯೂ ಯಾವುದೇ ಸ್ಪಂದನೆ ದೊರೆಯದ ಕಾರಣ ಸಂಘಟಿತ ಹೋರಾಟಕ್ಕೆ ಮುಂದಡಿ ಇಡುತ್ತೇವೆ ಎಂದು ಬಿಜೂರು ರೈಲ್ವೇ ಯಾತ್ರಿಕರ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ ಕೆರ್ಗಾಲು ಹೇಳಿದರು.

ಅವರು ಇಲ್ಲಿನ ನಂದನವನ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೂರು ರೈಲ್ವೆ ನಿಲ್ದಾಣ ಅಭಿವೃದ್ಧಿಯ ಬಗ್ಗೆ ಸಂಸದರು ಹಾಗೂ ಹಾಗೂ ಸಂಬಂಧಿಸಿದವರಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ನಿಲ್ದಾಣಕ್ಕೆ ಭೇಟಿ ನೀಡಲು ಸಾಕಷ್ಟು ಭಾರಿ ಕೇಳಿಕೊಂಡರೂ ಭೇಟಿ ನೀಡಿಲ್ಲ. ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ ನಮ್ಮ ಸಂಸದರಿಗೆ ಬೈಂದೂರು ರೈಲ್ವೆ ನಿಲ್ದಾಣದ ಅಭಿವೃದ್ಧಿಯಲ್ಲಿ ತೋರುತ್ತಿರುವ ಕಾಳಜಿ ಬಿಜೂರು ರೈಲ್ವೆ ನಿಲ್ದಾಣದ ಬಗ್ಗೆ ತೋರುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಎಲ್ಲಾ ಸೌಕರ್ಯಗಳಿರುವ ಬಿಜೂರು ನಿಲ್ದಾಣದಲ್ಲಿ ಯಾವ ರೈಲನ್ನೂ ನಿಲ್ಲಿಸದೇ, ಈಗ ಬೈಂದೂರು ನಿಲ್ದಾಣದ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ಮಂಜೂರು ಮಾಡಿಸಿರುವುದು ತೆರಿಗೆ ಹಣ ಪೋಲು ಮಾಡಿದಂತೆಯೇ ಸರಿ. ಇದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂದವರು ಪ್ರಶ್ನಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಬಿಜೂರು ರೈಲ್ವೆ ನಿಲ್ದಾಣವೇ ಸಮೀಪದ ಮಾರ್ಗ. ಕೆರಳದಿಂದ ಬರುವ ಯಾತ್ರಾರ್ಥಿಗಳು ಬಿಜೂರು ರೈಲ್ವೆ ನಿಲ್ದಾಣದಲ್ಲಿ ಇಳಿದು 26 ಕಿ.ಮೀ ದೂರವನ್ನು ಕ್ರಮಿಸುವುದು ಸೂಕ್ತವೇ ಅಥವಾ ಆ ಬಳಿಕದ ಬೈಂದೂರು ನಿಲ್ದಾಣದಲ್ಲಿ ಇಳಿದು 30 ಕಿ.ಮೀ ದೂರ ಕ್ರಮಿಸುವುದು ಸೂಕ್ತವೇ ಎಂಬುದನ್ನು ಜನಪ್ರತಿನಿಧಿಗಳು ಅರಿಯಬೇಕಿದೆ. ಈ ಬಗ್ಗೆ ಅಗತ್ಯವಿದ್ದರೆ ಕೊಂಕಣ್ ರೈಲ್ವೆ ಮೂಲಕ ಸರ್ವೆ ನಡೆಸಲಿ. ಅಲ್ಲದೇ ಬಿಜೂರು ಈ ಭಾಗದ ಕೇಂದ್ರ ಸ್ಥಳವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಬಹುಪಾಲು ಜನರು ದುಡಿಮೆಗೆ ಮುಂಬೈ, ಗುಜರಾತ್ ಹಾಗೂ ಬೆಂಗಳೂರು ನಗರವನ್ನು ಅವಲಂಬಿಸಿದ್ದಾರೆ. ಅವರೆಲ್ಲರೂ ಬಹುಪಾಲು ರೈಲು ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಇಷ್ಟಿದ್ದರೂ ಸಹ ಬಿಜೂರು ರೈಲ್ವೆ ನಿಲ್ದಾಣವನ್ನು ಕಡೆಗಣನೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಈ ಹಿಂದೆ ಬಿಜೂರಿನಲ್ಲಿ ಗರೀಬ್ ರಥ್ ಎಕ್ಸ್ಪ್ರೆಸ್ ರೈಲು ನಿಲುಗಡೆ ಇತ್ತು. ಆದರೆ ಅದನ್ನು ಬೈಂದೂರಿಗೆ ಸ್ಥಳಾಂತರಿಸಲಾಯಿತು. ಬಿಜೂರಿನಲ್ಲಿ ಎರಡು ಲೂಪ್ ಲೈನ್ ಇರುವಂತಹ ನಿಲ್ದಾಣವಿರುವಾಗ, ಗರೀಬ್ ರಥ ರೈಲನ್ನು ಬೈಂದೂರಿಗೆ ಸ್ಥಳಾಂತರಿಸುವ ಅಗತ್ಯವೇನು? ಅಲ್ಲದೇ ಸಂಸದರು ತಮ್ಮ ಆಡಳಿತ ವ್ಯಾಪ್ತಿಗೆ ಬರುವ ಬೇರೆ ನಿಲ್ದಾಣಗಳಿಗೆ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಬೇಡಿಕೆ ಇಡುತ್ತಾರೆ. ಆದರೆ ಬಿಜೂರಿಗೆ ಮೆಮು ರೈಲನ್ನು ಕೇಳುತ್ತಿರುವುದಕ್ಕೆ ಕಾರಣವೇನು? ಬಿಜೂರಿನಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಏಕೆ ಬೇಡಿಕೆ ಇಡಲಿಲ್ಲ ಎಂದವರು ಪ್ರಶ್ನಿಸಿದರು. ಈ ಮಧ್ಯೆ ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಇದ್ದು ರೈಲ್ವೆ ಕಂಬವನ್ನು ತೆರವುಗೊಳಿಸಲು ಮತ್ತು ಸೇತುವೆಗೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಸಹಕರಿಸಿದ್ದರು ಎಂದರು.
ಬೈಂದೂರು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ನಮ್ಮ ವಿರೋಧವಿಲ್ಲ. ಆದರೆ ಬಿಜೂರು ನಿಲ್ದಾಣದ ಕಡೆಗಣನೆಯೂ ಸರಿಯಲ್ಲ ಎಂಬುದನ್ನು ಸಂಸದರು ಅರ್ಥಮಾಡಿಕೊಳ್ಳಬೇಕಿದೆ. ಬಿಜೂರು ನಿಲ್ದಾಣದಲ್ಲಿ ರೈಲು ನಿಲ್ಲಿಸಬೇಕಾದರೆ ಹೆಚ್ಚುವರಿ ಸಮಯ ನೀಡುವ ಅಗತ್ಯವಿಲ್ಲ. ಈಗಾಗಲೇ ಪ್ರತಿದಿನ 10-12 ಪ್ಯಾಸೆಂಜರ್ ರೈಲುಗಳು ಬಿಜೂರು ರೈಲ್ವೇ ನಿಲ್ದಾಣದಲ್ಲಿ ಕ್ರಾಸಿಂಗ್ ಗಾಗಿ ನಿಲ್ಲುತ್ತವೆ. ಅವುಗಳನ್ನು ಸ್ಟಾಪೇಜ್ ಆಗಿ ಬದಲಿಸಿ ರೈಲು ಹತ್ತಲು – ಇಳಿಯಲು ಪ್ರಯಾಣಿಕರಿಗೆ ಅವಕಾಶ ನೀಡಿದರೆ ಬಿಜೂರು ನಿಲ್ದಾಣ ಸದುಪಯೋಗವಾಗುತ್ತದೆ. ಬಿಜೂರು ನಿಲ್ದಾಣದಲ್ಲಿ ಕನಿಷ್ಠ 4 ಎಕ್ಸ್‌ಪ್ರೆಸ್ ರೈಲು ನಿಲುಗಡೆ ವ್ಯವಸ್ಥೆ ಮಾಡುವಂತೆ ಆಗ್ರಹಿಸುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದನೆ ದೊರೆಯದಿದ್ದಲ್ಲೀ ವಿವಿಧ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಕೆರ್ಗಾಲು ಪೇಟೆಯಿಂದ ರೈಲು ನಿಲ್ದಾಣ ಚಲೋ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಹೋರಾಟಗಾರ ಡಾ. ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ, ಬಿಜೂರು ರೈಲ್ವೆ ನಿಲ್ದಾಣ ನಿರ್ಮಿಸುವ ಸಂದರ್ಭ ಸುತ್ತಮುತ್ತಲಿನ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡು, ಅತೀ ಕಡಿಮೆ ಪರಿಹಾರ ಪಡೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ಕೆಲವು ಕುಟುಂಬದ ಸದಸ್ಯರಿಗೆ ಮಾತ್ರವೇ ಉದ್ಯೋಗ ದೊರೆತಿದೆ. ಅವಿಭಕ್ತ ಕುಟುಂಬದ ತೊಂದರೆಗೊಳಗಾಗಿದೆ. ಅದರ ಹೊರತಾಗಿಯೂ ಬಿಜೂರು ರೈಲ್ವೆ ನಿಲ್ದಾಣ ಆದಾಗಿನಿಂದಲೂ ಎಲ್ಲಾ ಸಂಸದರೂ ನಿಲ್ದಾಣದ ಅಭಿವೃದ್ಧಿ, ರೈಲು ನಿಲುಗಡೆಯ ಬಗ್ಗೆ ಅಸಡ್ಡೆ ತೋರುತ್ತಲೇ ಬಂದಿದ್ದಾರೆ. ಹಿಂದಿನಿಂದಲೂ ಈ ಬಗ್ಗೆ ಹೋರಾಟ ಮಾಡುತ್ತಿದ್ದು, ಮುಂದೆಯೂ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.
ಈ ವೇಳೆ ಬಿಜೂರು ರೈಲ್ವೇ ಯಾತ್ರಿಕರ ಹೋರಾಟ ಸಮಿತಿ ಗೌರವಾಧ್ಯಕ್ಷ ಪುಂಡಲೀಕ ಕಿಣಿ, ಶ್ರೀಶ ಭಟ್ ಕೆರ್ಗಾಲ್, ಮಂಜು ದೇವಾಡಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
















