ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾನೂನನ್ನು ದುರುಪಯೋಗ ಮಾಡಿಕೊಂಡು ಅಮಾಯಕ ಆಟೋ ಚಾಲಕರೋರ್ವನನ್ನು ಕೆಂಪು ಕಲ್ಲು ಕಳ್ಳತನದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ್ದ ಗಂಗೊಳ್ಳಿ ಠಾಣೆ ಪೊಲೀಸರ ಅಮಾನವೀಯ ಕೃತ್ಯಕ್ಕೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದ್ದು, ಚಾಲಕನನ್ನು ಪ್ರಕರಣದಿಂದ ಸಂಪೂರ್ಣವಾಗಿ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಕುಂದಾಪುರದ ಆಲೂರು ಗ್ರಾಮದ ಆಟೋ ಚಾಲಕ ಶ್ರೀನಿವಾಸ ಪೂಜಾರಿ ಎಂಬವರು ಪೊಲೀಸರ ಅನ್ಯಾಯಕ್ಕೆ ಬಲಿಯಾಗಿ, ಇದೀಗ ನ್ಯಾಯಾಲಯದಿಂದ ನ್ಯಾಯ ಪಡೆದುಕೊಂಡ ವ್ಯಕ್ತಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಆಲೂರು ಗ್ರಾಮದ ನಿವಾಸಿ ಶ್ರೀನಿವಾಸ ಪೂಜಾರಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಉದಯ ಶೆಟ್ಟಿ ಎಂಬಾತ ಶ್ರೀನಿವಾಸ ಅವರ ಆಟೋವನ್ನು ಬಾಡಿಗೆಗೆ ಗೊತ್ತುಮಾಡಿಕೊಂಡು ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದ.
ಉದಯ ಶೆಟ್ಟಿ ಆಟೋ ಇಲ್ಲೆ ನಿಲ್ಲಿಸಿ ಸ್ವಲ್ಪ ಹೊತ್ತು ಹೋಗಿ ಬರುತ್ತೇನೆಂದು ಠಾಣೆಯ ಒಳಗೆ ಹೋದ ಬಳಿಕ, ಪೊಲೀಸರು ಹೊರಗಿದ್ದ ಶ್ರೀನಿವಾಸ ಪೂಜಾರಿ ಅವರನ್ನು ಒಳಗೆ ಕರೆದು ಉದಯ ಶೆಟ್ಟಿ ಪರಿಚಯವೆ ಎಂದು ವಿಚಾರಿಸಿದ್ದಾರೆ. ಪರಿಚಯಸ್ಥರು ಎಂದಿದ್ದನ್ನೇ ದುರುಪಯೋಗಪಡಿಸಿಕೊಂಡ ಪೊಲೀಸರು, ನಿಮಗೇನೂ ತೊಂದರೆಯಾಗಲ್ಲ, ತನಿಖೆಗೆ ಸಹಕರಿಸಿ ಎಂದು ನಂಬಿಸಿ ಓದಲು-ಬರೆಯಲು ಬಾರದ ಶ್ರೀನಿವಾಸ ಅವರಿಂದ ಕಳವು ಪ್ರಕರಣದ ದಾಖಲೆಗಳಿಗೆ ಸಹಿ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಪಡೆದುಕೊಂಡಿದ್ದಾರೆ.
ಘಟನೆ ನಡೆದು ಎರಡು ತಿಂಗಳ ಬಳಿಕ ಪೊಲೀಸರು ಮನೆಗೆ ಸಮನ್ಸ್ ತಂದುಕೊಟ್ಟಾಗ ಶ್ರೀನಿವಾಸ ಅವರಿಗೆ ಆಘಾತ ಕಾದಿತ್ತು. ಸಮನ್ಸ್‌ನಲ್ಲಿ ಉದಯ ಶೆಟ್ಟಿ ಜೊತೆ ಸೇರಿ ಸರ್ಕಾರಿ ಜಮೀನಿನಲ್ಲಿ ಕಲ್ಲು ಕ್ಯಾರೆ ಮಾಡಿ ಕೆಂಪು ಕಲ್ಲು ಕಳ್ಳತನ ಮಾಡಿರುವ ಗಂಭೀರ ಆರೋಪ ಹೊರಿಸಲಾಗಿತ್ತು. ಜೊತೆಗೆ ಶ್ರೀನಿವಾಸ ಅವರನ್ನು ಕೃತ್ಯದ ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು.
ಈ ಬಗ್ಗೆ ಆಟೋ ಚಾಲಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಾಗ, ಇದೊಂದು ಸಣ್ಣ ಕೇಸು. ಕೋರ್ಟ್ ಮುಂದೆ ತಪ್ಪು ಒಪ್ಪಿಕೊಳ್ಳಿ. ದಂಡದ ಹಣವನ್ನು ಮೊದಲ ಆರೋಪಿ ಉದಯ ಶೆಟ್ಟಿಯೇ ಕಟ್ಟುತ್ತಾರೆ, ಅವರೇ ಬೇಲ್ ಕೊಡಿಸುತ್ತಾರೆ ಎಂದು ಪೊಲೀಸರು ಉಡಾಫೆ ಉತ್ತರ ನೀಡಿದ್ದರು.
ಪೊಲೀಸರ ಮೋಸದಿಂದ ಕಂಗಾಲಾಗಿದ್ದ ಶ್ರೀನಿವಾಸ ಪೂಜಾರಿ ಅವರು ಕಾನೂನು ವಿದ್ಯಾರ್ಥಿಯೊಬ್ಬರ ಸಲಹೆಯಂತೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ, ಸಂಸ್ಥೆಯ ವಕೀಲ ಎನ್. ವಿವೇಕಾನಂದ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಆರಂಭಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, ಆಟೋ ಚಾಲಕನನ್ನು ಯಾವ ಆಧಾರದ ಮೇಲೆ ಆರೋಪಿಯನ್ನಾಗಿ ಮಾಡಿದ್ದೀರಿ? ಎಂದು ಪ್ರಶ್ನಿಸಿ ಗಂಗೊಳ್ಳಿ ಪೊಲೀಸರಿಗೆ ಖಡಕ್ ನೋಟಿಸ್ ಜಾರಿ ಮಾಡಿತ್ತು.
ಕೋರ್ಟ್ ನೋಟಿಸ್‌ಗೆ ಪೊಲೀಸರಿಂದ ಯಾವುದೇ ಸೂಕ್ತ ಉತ್ತರ ಬಾರದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಶ್ರೀನಿವಾಸ ಪೂಜಾರಿ ಅವರ ಮೇಲಿದ್ದ ಪ್ರಕರಣವನ್ನು ರದ್ದುಗೊಳಿಸಿ, ಅವರನ್ನು ಸಂಪೂರ್ಣ ದೋಷಮುಕ್ತಗೊಳಿಸಿದ್ದಾರೆ.
ಇನ್ನು ತಮ್ಮ ಬಗ್ಗೆ ಇಲ್ಲಸಲ್ಲದ ಕಳ್ಳತನದ ಆರೋಪ ಹೊರಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯ ವಿರುದ್ಧ ಶೀಘ್ರದಲ್ಲೇ ಮಾನನಷ್ಟ ಮೊಕದ್ದಮೆ ಹೂಡಲು ಶ್ರೀನಿವಾಸ ಪೂಜಾರಿ ತೀರ್ಮಾನಿಸಿದ್ಧಾರೆ.
















