ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪ್ಪುಂದ ಶಾಖೆಯ ವತಿಯಿಂದ ನಬಾರ್ಡ್‌ನ ಸಹಯೋಗದಲ್ಲಿ ಗ್ರಾಹಕರಿಗಾಗಿ ಆರ್ಥಿಕ ಅರಿವು ಕಾರ್ಯಕ್ರಮವು ಉಪ್ಪುಂದ ನಾಡದೋಣಿ ಸಭಾಭವನದಲ್ಲಿ ಗುರವಾರ ನಡೆಯಿತು.

ಹಿರಿಯ ಕೃಷಿಕರು ಹಾಗೂ ಹೊಸ್ಕೋಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟೇಶ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪ್ಪುಂದ ಶಾಖೆಯು ಈ ಭಾಗದ ರೈತಾಪಿ ಜನರಿಗೆ ನೀಡುತ್ತಿರುವ ಸೇವೆಗಳನ್ನು ಶ್ಲಾಘಿಸಿದರು.

ಬ್ಯಾಂಕಿನ ಹಿರಿಯ ಗ್ರಾಹಕರಾದ ಡಾ. ಯು. ವಿಶ್ವೇಶ್ವರ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಇತ್ತೀಚಿಗಷ್ಟೇ ಅಪಘಾತದಲ್ಲಿ ಮೃತರಾದ ಶ್ರೀನಿಧಿ ನವೋದಯ ಸ್ವಸಹಾಯ ಗುಂಪಿನ ಸದಸ್ಯ ಹರಿಶ್ಚಂದ್ರ ಖಾರ್ವಿ ಅವರ ಕುಟುಂಬಕ್ಕೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ರೂ. ಒಂದು ಲಕ್ಷ ಚೈತನ್ಯ ವಿಮಾ ಪರಿಹಾರ ಮೊತ್ತವನ್ನು ನೀಡಲಾಯಿತು.
ಕೆನರಾ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಕೇಂದ್ರ ಸಿಬ್ಬಂದಿ ಆಶಾಲತಾ ಮಾತನಾಡಿ, ಅನ್‌ಲೈನ್ ಬ್ಯಾಂಕಿಂಗ್‌ನಲ್ಲಿ ನಡೆಯುವ ವಂಚನೆಗಳ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಬೇಕು. ಅಪರಿಚಿತ ಕರೆಗಳು ಸಂದೇಶಗಳು ಹಾಗೂ ಲಿಂಕ್‌ಗಳ ಮೂಲಕ ನಡೆಯುವ ವಂಚನೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು. ಶ್ರೀ ಬೊಬ್ಬರ್ಯ ದೇವಸ್ಥಾನ ಹೊಸ್ಕೋಟೆ ಅವರಿಗೆ ಕ್ಯುಆರ್ ಕೋಡ್ ವಿತರಿಸಲಾಯಿತು. ಸಭೆಯಲ್ಲಿ ಸುಮಾರು 150ಕ್ಕೂ ಮಿಕ್ಕಿ ಗ್ರಾಹಕರು ಉಪಸ್ಥಿತರಿದ್ದರು.


ಶಾಖಾ ವ್ಯವಸ್ಥಾಪಕ ಶಂಕರ ಶೆಟ್ಟಿ ಪ್ರಸ್ತಾವಿಸಿ ತಮ್ಮ ಬ್ಯಾಂಕಿನಲ್ಲಿ ನೀಡುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿ ಸಭೆಯಲ್ಲಿ ಉಪಸ್ಥಿತರಿರುವ ಗ್ರಾಹಕರ ಸಹಕಾರವನ್ನು ಕೋರಿದರು.
ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾದ ಎಂ. ಮೋಹನದಾಸ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಕಾರ ಸಂಘದ ವಲಯ ಮೇಲ್ವಿಚಾಕರಾದ ಶಿವರಾಮ ಪೂಜಾರಿ, ನಾಡದೋಣಿ ಸಂಘದ ಅಧ್ಯಕ್ಷ ಕುಮಾರ ಖಾರ್ವಿ, ಸ್ಥಳಿಯರಾದ ಆನಂದ ಖಾರ್ವಿ ಹಾಗೂ IT ವಿಭಾಗದ ಅಧಿಕಾರಿ ಮಹೇಶ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ಶಂಕರ ಶೆಟ್ಟಿ ಸ್ವಾಗತಿಸಿ, ಪ್ರದೀಪ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿ, ಶಾಖೆಯ ಸಿಬ್ಬಂದಿ ಗೋಪಾಲ ವಂದಿಸಿದರು.
















