ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವಪೀಳಿಗೆಗೆ ಪ್ರಾಚೀನ ಪಾರಂಪರಿಕ ಆಯುರ್ವೇದ ಪದ್ಧತಿ ಹಾಗೂ ನೈಸರ್ಗಿಕ ಗ್ರಾಮ ಜೀವನಶೈಲಿಯನ್ನು ಪರಿಚಯಿಸುವ ಮಹತ್ತರ ಉದ್ದೇಶದೊಂದಿಗೆ, ಕರಾವಳಿ ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ ಚಿತ್ರಕೂಟ ಆಯುರ್ವೇದ ಹಬ್ಬ 2026ರ ಅಕ್ಟೋಬರ್ 4ರ ಭಾನುವಾರ ಆಯೋಜಿಸಲಾಗಿದೆ.
ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಈ ಮಹತ್ವದ ಹಬ್ಬದ ಅಧಿಕೃತ ಲೋಗೋ ಅನಾವರಣ ಹಾಗೂ ದಿನಾಂಕ ಘೋಷಣೆ ನೆರವೇರಿತು.

ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿ ಮಾತನಾಡಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರು, “ಕಣ್ಣಿಗೆ ಮೊಬೈಲ್ ಪರದೆಯ ಕೃತಕ ಬೆಳಕು, ನಾಲಿಗೆಗೆ ಜಂಕ್ ಆಹಾರ, ಮನಸ್ಸಿಗೆ ಯಾಂತ್ರಿಕ ಬದುಕಿನ ಒತ್ತಡ- ಇಂದಿನ ಯುವಜನತೆಯನ್ನು ಆತಂಕ, ನಿದ್ರಾಹೀನತೆ ಮತ್ತು ಉದರ ಸಮಸ್ಯೆಗಳು ಸೇರಿದಂತೆ ಸಾಕಷ್ಟು ಜೀವನಶೈಲಿ ಸಮಸ್ಯೆಗಳಿಂದ ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಸಂಕಷ್ಟಗಳಿಗೆ ಕೇವಲ ಇಂಗ್ಲಿಷ್ ಹೆಸರುಗಳನ್ನು ಹುಡುಕಿ ಕಂಗಾಲಾಗುವ ಬದಲು, ನಮ್ಮ ನೆಲದ ಆಯುರ್ವೇದ ಜ್ಞಾನ ಮತ್ತು ಹಳ್ಳಿಯ ಸಹಜ ದಿನಚರಿಯಲ್ಲೇ ಅದ್ಭುತ ಪರಿಹಾರವಿದೆ. ಆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಹಬ್ಬ ಆಯೋಜಿಸಿದ್ದೇವೆ” ಎಂದು ಹೇಳಿದರು. ಇದೇ ಉದ್ದೇಶದೊಂದಿಗೆ ನವಪೀಳಿಗೆಯನ್ನು ಮಣ್ಣಿನ ಮಡಿಲಿಗೆ ಕರೆತಂದು ಸ್ವಾಸ್ಥ್ಯ ಕರುಣಿಸಲು ಈ ವಿನೂತನ ಜೀವನಶೈಲಿ ಆಂದೋಲನವನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.


ಯುವಜನತೆಗಾಗಿ ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನ:
ಯುವಪೀಳಿಗೆಯನ್ನು ಅವರದ್ದೇ ಭಾಷೆ ಹಾಗೂ ಮಾಧ್ಯಮಗಳ ಮೂಲಕ ತಲುಪಲು ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನದಡಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಯುರ್ವೇದದ ಮಹತ್ವ ಮತ್ತು ಜೀವನಕ್ರಮ ಕುರಿತು ರೀಲ್ಸ್ ತಯಾರಿಸುವ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಒಟ್ಟು 75 ಸಾವಿರ ರೂಪಾಯಿ ಬಹುಮಾನ (25 ಸಾವಿರ ರೂ. ನಗದು ಹಾಗೂ 50 ಸಾವಿರ ರೂ. ಮೌಲ್ಯದ ಪಂಚಕರ್ಮ ಚಿಕಿತ್ಸೆ) ಬಹುಮಾನಗಳನ್ನು ನೀಡಲಾಗುವುದು. ಸೆಪ್ಟೆಂಬರ್ 30 ಈ ರೀಲ್ಸ್ ಸಲ್ಲಿಸಲು ಕೊನೆಯ ದಿನವಾಗಿದೆ. ಇದರೊಂದಿಗೆ ಅಕ್ಟೋಬರ್ 4ರಂದು ಸ್ಥಳದಲ್ಲೇ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ಮಕ್ಕಳಿಗೆ ಆಕರ್ಷಕ ನಗದು ಪುರಸ್ಕಾರ ಲಭಿಸಲಿದೆ. ಅಂದು ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಸಾಮಾಜಿಕ ಜಾಲತಾಣ ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ನೇರ ಸಂವಾದ ಕೂಡ ಜರುಗಲಿದೆ.
ಹಳ್ಳಿಯಲ್ಲೊಂದು ದಿನ: ಪ್ರಕೃತಿಯ ಮಡಿಲಲ್ಲಿ ಆರೋಗ್ಯದ ಅನುಭವ:
ನಗರ ಪ್ರದೇಶದ ಜನರಿಗೆ ಭಾನುವಾರದ ರಜಾ ದಿನವನ್ನು ಕುಟುಂಬ ಸಮೇತರಾಗಿ ಹಳ್ಳಿಯ ವಾತಾವರಣದಲ್ಲಿ ಕಳೆಯಲು ಹಳ್ಳಿಯಲ್ಲೊಂದು ದಿನ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನುರಿತ ವೈದ್ಯರಿಂದ ನಾಡಿ ಪರೀಕ್ಷೆ ನಡೆಸಿ ವ್ಯಕ್ತಿಯ ದೇಹ ಪ್ರಕೃತಿಗೆ ತಕ್ಕ ಆಹಾರ ಶೈಲಿಯ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಗೋಶಾಲೆ ಭೇಟಿ ಹಾಗೂ ಗೋಮಾತೆಯ ಸಾಮೀಪ್ಯದ ಅನುಭವ, ಮನೆಯ ಅಡುಗೆ ಸಾಮಗ್ರಿಗಳಿಂದಲೇ ರೋಗನಿರೋಧಕ ಕಷಾಯ ತಯಾರಿಸುವ ತರಬೇತಿ, 250ಕ್ಕೂ ಹೆಚ್ಚು ಅಪರೂಪದ ಗಿಡಮೂಲಿಕೆಗಳ ಪರಿಚಯ ನಡಿಗೆ ಇರಲಿದೆ. ಇದರೊಂದಿಗೆ ಸಾಂಪ್ರದಾಯಿಕ ಆಯುರ್ವೇದ ಆಹಾರ ಖಾದ್ಯಗಳು ಹಾಗೂ ಸಾವಯವ ಕೃಷಿ ಉತ್ಪನ್ನಗಳ ಆಹಾರ ಮೇಳ-ಸಂತೆ ಮತ್ತು ದೇಹವನ್ನು ಶುದ್ಧೀಕರಿಸುವ ಪ್ರಾಚೀನ ಪಂಚಕರ್ಮ ವಿಧಾನಗಳ ಪರಿಚಯ ನಡೆಯಲಿದೆ.
ಅಕ್ಟೋಬರ್ 4ರಂದು ಆಲೂರಿನ ಚಿತ್ರಕೂಟ ಆಯುರ್ವೇದ ಕೇಂದ್ರದ 18 ಎಕರೆ ಹಸಿರು ಪರಿಸರದಲ್ಲಿ ನಡೆಯಲಿರುವ ಈ ಅಪರೂಪದ ಆಯುರ್ವೇದ ಹಬ್ಬಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವ್ಯವಸ್ಥೆಯ ದೃಷ್ಟಿಯಿಂದ ಆಸಕ್ತರು ಮುಂಚಿತವಾಗಿಯೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ವಿವರ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 9187471578 ಸಂಪರ್ಕಿಸಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ರಘುರಾಮ ಶಾಸ್ತ್ರಿ ಮತ್ತು ಮಹಾಬಲ ಬಾಯರಿ ಅವರು ಲೋಗೋ ಅನಾವರಣ ಮಾಡಿದರು. ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ, ಸಮಾಜದ ಗಣ್ಯರಾದ ಉದಯ್ ಜಿ ಪೂಜಾರಿ, ಉದಯ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ರಾಜೇಶ್ ದೇವಾಡಿಗ, ಚಂದ್ರಶೇಖರ್ ಶೆಟ್ಟಿ, ರವಿರಾಜ್ ಶೆಟ್ಟಿ, ಪ್ರಭಾಕರ ಆಚಾರ್ಯ, ಕಲಾವತಿ ಬಾಯರಿ, ಡಾ. ಅನುಲೇಖಾ ಬಾಯರಿ ಮತ್ತು ಬಹಳಷ್ಟು ಮಂದಿ ಗಣ್ಯರು ಇದ್ದರು.
















