ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಮತ್ತು ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿಯಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ಈ ವರ್ಷವೂ ಸಹ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳ ಸಮಾರೋಪವು ನಡೆಯಿತು.
ಸಮಾರೋಪ ಸಮಾರಂಭದ ಘನಾಧ್ಯಕ್ಷರಾದ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ಟರು ದೇವಾಲಯದ ಸಹಯೋಗದ ಕಾರ್ಯಕ್ರಮವನ್ನು ಮಾತನಾಡಿ, ಸಿದ್ಧಿವಿನಾಯಕನ ತಾಣವಾದ ಇಲ್ಲಿ ಬಂದು ಭಾಗವಹಿಸಿ ಸ್ಪರ್ಧೆಗಳಲ್ಲಿ ನಿಮ್ಮ ಪ್ರಯತ್ನವನ್ನು ನಡೆಸಿರುವ ಸರ್ವರೂ ಸಿದ್ಧಿಯನ್ನು ಪಡೆವಂತವರಾಗಲಿ ಎಂದು ಹಾರೈಸಿದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣದ ಪ್ರಾಧ್ಯಾಪಕರಾದ ಶ್ರೀ ಪಾಂಡುರಂಗ ರವರು ಗೆದ್ದವರಿಗೆ ಅಭಿನಂದಿಸಿ ಮಾತಾಡುತ್ತಾ ಸೋತವರು ಕುಗ್ಗಲೇ ಬಾರದು. ಇರುವವರಲ್ಲಿ ಮೂವರನ್ನು ಆರಿಸುವಾಗ ನಿಮ್ಮಲ್ಲಿ ಕೆಲವು ಕೊರತೆಗಳನ್ನು ಕಂಡಿರಬಹುದು. ಅವುಗಳನ್ನು ತಿದ್ದಿ ಸಾಧಿಸಿ ಮುಂದಿನ ವರ್ಷಗಳಲ್ಲಿ ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕು. ಎಂದು ತಿಳಿ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಹಟ್ಟಿಅಂಗಡಿ ಗ್ರಾಮಪಂಚಾಯತ್‌ನ ಪಿಡಿಓ ಆದ ರೇಣುಕಾ ಎಸ್. ಹೆಗ್ಡೆ ಮಾತನಾಡಿ, ಹಟ್ಟಿಅಂಗಡಿ ಗ್ರಾಮವು ತಾಲೂಕು ಮಟ್ಟದ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಾ ತಾಲೂಕಿನಲ್ಲಿ ಉತ್ತಮ ಹೆಸರನ್ನು ಪಡೆಯುತ್ತಿರುವುದು ನಮ್ಮ ಹೆಮ್ಮೆ ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ವಿವಿಧ ಸ್ಪರ್ಧೆಗಳಲ್ಲಿನ ವಿಜೇತರ ಪಟ್ಟಿಯನ್ನು ಸಹಶಿಕ್ಷಕಿಯರಾದ ಶ್ರೀಮತಿ ನೇತ್ರಾವತಿ ಹಾಗೂ ಕುಮಾರಿ ಸುಶ್ಮಿತಾ ಪೂಜಾರಿ ವಾಚಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಮತ್ತು ಶ್ರೀ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕುಂದಾಪುರ ಹಾಗೂ ಪ್ರಾಥಮಿಕ ವಿಭಾಗದಲ್ಲಿ ವಿಶ್ವವಿನಾಯಕ ಸಿಬಿಎಸ್‌ಇ ಶಾಲೆ, ತೆಕ್ಕಟ್ಟೆ ಈ ಶಾಲೆಗಳಿಗೆ ವಿಶೇಷ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಸಂದೀಪನ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಾಗೂರು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಪ್ರಾಥಮಿಕ ವಿಭಾಗದಲ್ಲಿ ಶ್ರೀ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕುಂದಾಪುರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿಗಳು, ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಮಾಲಿನೀ, ಶೈಕ್ಷಣಿಕ ಸಲಹೆಗಾರರಾದ ಸುಜಾತಾ ಸದಾರಾಮ್, ಅರವತ್ತಕ್ಕೂ ಅಧಿಕ ಪರಿಣತ ತೀರ್ಪುಗಾರರು ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ಬಳಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯಾದ ನೀಲಾಂಜಲಿ ನಿರ್ವಹಿಸಿ, ಧನ್ಯವಾದವನ್ನು ಸಮರ್ಪಿಸಿದರು.
















