ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಯೊಬ್ಬರ ಜೀವನದಲ್ಲೂ ಆರ್ಥಿಕ ಶಿಸ್ತು ಅತ್ಯಂತ ಮುಖ್ಯ. ಬ್ಯಾಂಕಿನಿಂದ ಪಡೆಯುವ ಸಾಲವು ಕುಟುಂಬಕ್ಕೆ ಆಸರೆಯಾಗಬೇಕೇ ಹೊರತು ಹೊರೆಯಾಗಬಾರದು. ಆ ನಿಟ್ಟಿನಲ್ಲಿ ಗ್ರಾಹಕರು ಜವಾಬ್ದಾರಿಯಿಂದ ವ್ಯವಹರಿಸಬೇಕು ಹಾಗೂ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಎಸ್‌ಸಿಡಿಸಿ ಬ್ಯಾಂಕಿನ ಎಜಿಎಂ ಮೋಹನ್ ದಾಸ್ ಹೆಬ್ಬಾರ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಗಂಗೊಳ್ಳಿ ಶಾಖೆಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗಾಗಿ ಜರಗಿದ ’ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕುಂದಾಪುರ ತಾಲೂಕು ಕಚೇರಿಯ ಆರ್ಥಿಕ ಸಾಕ್ಷರತಾ ಕಾರ್ಯಾಲಯದ ಆಶಾಲತಾ ಅವರು, ಅಪಘಾತ ವಿಮಾ ಸೌಲಭ್ಯಗಳು, ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಎದುರಾಗಬಹುದಾದ ಸೈಬರ್ ವಂಚನೆಗಳ ಕುರಿತು ಜಾಗೃತಿ ಮೂಡಿಸಿದರು. ಮುಖ್ಯ ಅತಿಥಿಯಾಗಿದ್ದ ಶಾಖಾ ನಿರೀಕ್ಷಕ ರಾಘವೇಂದ್ರ ಉಡುಪ ಮತ್ತು ತ್ರಾಸಿ ಶಾಖಾ ವ್ಯವಸ್ಥಾಪಕ ವೆಂಕಟೇಶ್ ಬಿಲ್ಲವ ಅವರು ಮಾಹಿತಿ ನೀಡಿ ಮಾತನಾಡಿದರು.
ಗಂಗೊಳ್ಳಿ ಶಾಖೆಯ ವ್ಯವಸ್ಥಾಪಕ ಗಣೇಶ್ ಭಟ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕ್ ಸಿಬ್ಬಂದಿ ಸುಧೀಂದ್ರ ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವಿಕ್ರಮ್ ವಂದಿಸಿದರು.
















