ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರತಿಭಾ ಕಾರಂಜಿ ಎಂಬುದು ಕೇವಲ ಸ್ಪರ್ಧೆಯಲ್ಲ; ಮಕ್ಕಳಲ್ಲಿರುವ ಕಲಾ ಪ್ರತಿಭೆಗಳಿಗೆ ಜೀವ ತುಂಬಿ, ಅವರ ಭವಿಷ್ಯದ ಸಾಧನೆಗೆ ಭದ್ರ ಬುನಾದಿ ಹಾಕುವ ಸಾಂಸ್ಕೃತಿಕ ಸಂಭ್ರಮವಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಸ್ಪರ್ಧಾ ಮನೋಭಾವ, ಆತ್ಮವಿಶ್ವಾಸ, ಸಮಯಪ್ರಜ್ಞೆ, ನಾಯಕತ್ವ ಗುಣ ಹಾಗೂ ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹಾಗೂ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಗಂಗೊಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಎಸ್.ವಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಕುಂದಾಪುರ ವಲಯ ಬಿಆರ್ಪಿ ಸಂತೋಷ ಕುಮಾರ್ ಶೆಟ್ಟಿ, ಶಿಕ್ಷಣ ಇಲಾಖೆಯ ಪ್ರದೀಪ ಕುಮಾರ್ ಶೆಟ್ಟಿ, ಮಂಜುನಾಥ ಕಾಮತ್, ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್, ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಜಿ.ವಿಠಲ ಶೆಣೈ, ಪತ್ರಕರ್ತ ಬಿ.ರಾಘವೇಂದ್ರ ಪೈ, ಎಸ್.ವಿ. ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಕೋಸ್ಟ ಮತ್ತಿತರರು ಉಪಸ್ಥಿತರಿದ್ದರು.
ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಸ್ವಾಗತಿಸಿ, ಶಿಕ್ಷಣ ಸಂಯೋಜಕ ನಾರಾಯಣ ಮರಾಠೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ದಿವ್ಯಶ್ರೀ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

















