ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ಜೆಸಿ ಸಪ್ತಾಹದ ಅಂಗವಾಗಿ, ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ನಿಸ್ವಾರ್ಥ ಸಾಧಕರನ್ನು ಗುರುತಿಸಿ ಗೌರವಿಸುವ ‘ಸೈಲೆಂಟ್ ಸ್ಟಾರ್ ಅವಾರ್ಡ್’ ಪ್ರದಾನ ಕಾರ್ಯಕ್ರಮವು ಸಪ್ತಾಹದ 7ನೇ ದಿನದಂದು ಬೈಂದೂರಿನ ಶಾರದಾ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಜೆಎಫ್‌ಎಂ. ಚೈತ್ರಾ ಸತೀಶ್ ವಹಿಸಿದ್ದರು. ಸಮಾಜದಲ್ಲಿ ಯಾವುದೇ ಪ್ರಚಾರದ ಹಂಬಲವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇಬ್ಬರು ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಂಜೀವ ದೇವಾಡಿಗ, ಕಳವಾಡಿ: ಸಾವಿರಾರು ಅನಾಥ, ಕಾಯಿಲೆಯಿಂದ ಬಳಲುತ್ತಿರುವ ಹಾಗೂ ಅಪಘಾತಕ್ಕೀಡಾದ ಮೂಕ ಜೀವಿಗಳಾದ ಗೋವುಗಳನ್ನು ರಕ್ಷಿಸಿ, ಸ್ವಂತ ಮಕ್ಕಳಂತೆ ಪ್ರೀತಿಯಿಂದ ಪೋಷಿಸುತ್ತಿರುವ ಇವರ ಅಪೂರ್ವ ಗೋಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಶ್ರೀನಿವಾಸ್ ದೇವಾಡಿಗ, ಬೈಂದೂರು: ವೃತ್ತಿಯಲ್ಲಿ ಬಳೆ ವ್ಯಾಪಾರಸ್ಥರಾಗಿದ್ದು, ಸ್ವಯಂಪ್ರೇರಿತರಾಗಿ ಸುಮಾರು 35ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ತುರ್ತು ಸಂದರ್ಭಗಳಲ್ಲಿ ಅದೆಷ್ಟೋ ಜೀವಗಳನ್ನು ಉಳಿಸಿದ ಇವರ ಜೀವಪರ ಕಳಕಳಿ ಹಾಗೂ ಸಮಾಜಮುಖಿ ಸೇವೆಯನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಪ್ರಚಾರದ ಬೆನ್ನುಬೀಳದೆ ಸಮಾಜಕ್ಕೆ ನಿರಂತರವಾಗಿ ನೆರವಾಗುವ ಇಂತಹ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಜೆಸಿಐ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಪೂರ್ವಾಧ್ಯಕ್ಷರಾದ ಜೆಸಿ ಮಣಿಕಂಠ ಎಸ್., ಜೆಸಿ ಸವಿತಾ ಗಾಣಿಗ, ಜೆಸಿ ಸೂರ್ಯಕಾಂತಿ, ಜೆಸಿ ರಾಘವೇಂದ್ರ ಸೂರ್ಕುಂದ, ಜೆಸಿ ಸತೀಶ್ ಯಡ್ತರೆ ಹಾಗೂ ಜ್ಯೋತಿ ಎಚ್., ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.
















