ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನರ ಸೇವೆಯನ್ನು ತಮ್ಮ ಸಾರ್ವಜನಿಕ ಜೀವನದ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿಯಲ್ಲಿ ’ಸೇವಾ ಸಂಕಲ್ಪ’ಎಂಬ ಪರಿಕಲ್ಪನೆ ಪ್ರಮುಖ ಸ್ಥಾನ ಪಡೆದಿದೆ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಹೇಳಿದರು.

ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮ ದಿನದ ಪ್ರಯುಕ್ತ ’ಸೇವಾ ಸಂಕಲ್ಪ ಅಭಿಯಾನ’ ಅಂಗವಾಗಿ ಗುಜ್ಜಾಡಿ ಗ್ರಾಮದ ಮಂಕಿಯ ಪುಂಡಲೀಕ ಮಂಕಿ ಅವರ ಮನೆಯಲ್ಲಿ ಗುರುವಾರ ನಡೆದ ’ಆಶೀರ್ವಾದ ದೀಪ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯದಲ್ಲಿಯೇ ಜನಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಅವರು ತಮ್ಮನ್ನು ’ಪ್ರಧಾನ ಸೇವಕ’ ಎಂದು ಬಿಂಬಿಸಿಕೊಂಡಿದ್ದು, ಬಡವರು, ರೈತರು, ಮಹಿಳೆಯರು, ಯುವಕರು ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಸೇವೆ, ಕರ್ತವ್ಯ ಮತ್ತು ರಾಷ್ಟ್ರ ಪ್ರಥಮ ಎಂಬ ಆಶಯಗಳ ಮೂಲಕ ಜನ ಕಲ್ಯಾಣವನ್ನು ಮುಂದುವರಿಸುವ ಸಂಕಲ್ಪ ಮಾಡಿರುವ ನರೇಂದ್ರ ಮೋದಿಯವರು ಇನ್ನಷ್ಟು ವರ್ಷ ಪ್ರಧಾನ ಮಂತ್ರಿಯಾಗಿ ದೇಶ ಸೇವೆ ಮಾಡುವಂತಾಗಬೇಕು ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಮಂಕಿ ಮತ್ತು ಬಿಜೆಪಿ ಮುಖಂಡ ಮೋಹನ ಗುಜ್ಜಾಡಿ ಮಾತನಾಡಿ ಶುಭ ಹಾರೈಸಿದರು. ಮಂಡಲ ಉಪಾಧ್ಯಕ್ಷ ಮಿಥುನ್ ಬಿಜೂರು, ಕಾರ್ಯದರ್ಶಿ ಶಾಂತಿ ಖಾರ್ವಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ ಎನ್.ಡಿ., ಗುಜ್ಜಾಡಿ ಶಕ್ತಿಕೇಂದ್ರದ ಅಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ರಾಜೇಶ್, ಬಿಜೆಪಿ ಮುಖಂಡ ಹರೀಶ ಮೇಸ್ತ, ಪುಂಡಲೀಕ ಮಂಕಿ, ವಿವಿಧ ಮೋರ್ಚಾಗಳ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.
















