ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಹೇಗೆ ಸಹಾಯಕವೋ ಹಾಗೆಯೇ ಶಿಕ್ಷಕರ ಸಾಧನೆಗೂ ಪುಷ್ಟಿಯನ್ನು ಒದಗಿಸುತ್ತಿದೆ. ಈ ಶಾಲೆಯ ಹಿಂದಿ ಭಾಷಾ ಶಿಕ್ಷಕರಾದ ಗಣೇಶ್ ದೇವಾಡಿಗ ಅವರಿಗೆ ದೆಹಲಿಯಲ್ಲಿ ನಡೆದ ಪ್ರತಿಷ್ಠಿತ “ರಾಷ್ಟ್ರೀಯ ಶಿಕ್ಷಕರ ಪುರಸ್ಕಾರ-2026” ಲಭಿಸಿದೆ.
ದೆಹಲಿ ಸರಕಾರದ ’ಹಿಂದಿ ಅಕಾಡೆಮಿ’ ಮತ್ತು ಪ್ರಸಿದ್ಧ ’ಮಧುಬನ್ ಪಬ್ಲಿಕೇಷನ್ಸ್’ ಜಂಟಿಯಾಗಿ ಹಿಂದಿ ದಿನಾಚರಣೆಯ ಶುಭ ಸಂದರ್ಭದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಶಿಕ್ಷಕರ ಪುರಸ್ಕಾರ ಸಮಾರಂಭದಲ್ಲಿ ಇವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು. ಹಿಂದಿ ಭಾಷಾ ಬೋಧನೆಯಲ್ಲಿ ಇವರ ಸುದೀರ್ಘ ಸೇವೆ, ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಮತ್ತು ಆಸಕ್ತಿಯನ್ನು ಮೂಡಿಸುವಲ್ಲಿ ಇವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಹರ್ಷ ವ್ಯಕ್ತಪಡಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶಕರು. ಶಿಕ್ಷಕರು ಸಾಧನೆಯ ಹಾದಿಯಲ್ಲಿ ಸಾಗಿದರೆ ವಿದ್ಯಾರ್ಥಿಗಳು ಅದನ್ನು ಅನುಕರಿಸುತ್ತಾರೆ. ನಮ್ಮ ಶಾಲೆಯ ಹಿಂದಿ ಅಧ್ಯಾಪಕರಾದ ಶ್ರೀ ಗಣೇಶ್ ದೇವಾಡಿಗರು ಶಾಲೆಯ ಎಲ್ಲಾ ಕೆಲಸಗಳಲ್ಲೂ ಲವಲವಿಕೆಯಿಂದ ಭಾಗವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಪಾಠವನ್ನು ತಿಳಿ ಹೇಳುವುದರೊಂದಿಗೆ ಪ್ರತಿಯೊಂದು ವಿಚಾರದಲ್ಲೂ ತಮ್ಮ ಅನುಭವದ ಮೂಲಕ ಶಾಲೆಯ ಮತ್ತು ವಿದ್ಯಾರ್ಥಿಗಳ ಏಳಿಗೆಗೆ ಸೇವೆಗೈಯ್ಯುತ್ತಿದ್ದಾರೆ. ಅವರಿಗೆ ಸಂದ ಈ ಗೌರವ ಅವರ ಅಧ್ಯಾಪನ ಜೀವನದಲ್ಲಿ ಪ್ರೇರಣಾದಾಯಕವಾಗಲಿ. ಅವರಿಂದ ಸಾವಿರಾರು ವಿದ್ಯಾರ್ಥಿಗಳು ಭಾಷಾಧ್ಯಯನಗೈದು ಸಮಾಜವನ್ನು ಬೆಳಗುವಂತಾಗಲಿ ಎಂದು ಹಾರೈಸಿದರು.
ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಸುಜಾತಾ ಸದಾರಾಮ್ ಶಿಕ್ಷಕ- ಶಿಕ್ಷಕೇತರ ಮತ್ತು ವಿದ್ಯಾರ್ಥಿವೃಂದದ ಸರ್ವಸದಸ್ಯರೂ ಅಭಿನಂದನೆ ಸಲ್ಲಿಸಿ, ಶುಭಹಾರೈಸಿದರು.
















