ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಶಾಲಾ ಸಂಯೋಜಕರು ಹಾಗೂ ಇತರೆ ಸಿಬ್ಬಂದಿಗಳು ದೇಶದ ಈ ಮಹಾ ನಾಯಕರ ಭಾವಚಿತ್ರಗಳಿಗೆ ಪುಷ್ಪನಮನವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಹಶಿಕ್ಷಕಿ ಕೃಪಾಶ್ರೀ ಅವರು ಮಾತನಾಡುತ್ತಾ ” ಬಾಪೂಜಿ ಮಹಾತ್ಮ ಗಾಂಧೀಜಿಯವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ಗಾಂಧಿಯವರ ಸತ್ಯ,ಶಾಂತಿ, ಅಹಿಂಸೆಯ ತತ್ವಗಳನ್ನು ಇಂದು ಪ್ರಪಂಚದಾದ್ಯಂತ ಪಾಲಿಸಲಾಗುತ್ತಿದೆ. ಈ ನಾಡಿನ ಶ್ರೇಯೋನ್ನತಿಗೆ ಶ್ರಮಿಸಿದ ಮಹಾತ್ಮನ ಬದುಕು ಮತ್ತು ಸಂದೇಶಗಳು ನಮ್ಮೆಲ್ಲರಿಗೂ ಮಾದರಿ” ಎಂದು ತಿಳಿಸಿದರು.
ಸಹಶಿಕ್ಷಕಿ ಪೂರ್ಣಿಮಾ ಮಾತನಾಡಿ, “ಲಾಲ್ ಬಹುದ್ದೂರ್ ಶಾಸ್ತ್ರಿಯವರು ಈ ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲೊಬ್ಬರು. ದಿಟ್ಟ ನಿಲುವಿಗೆ ಹೆಸರಾಗಿದ್ದ ಶಾಸ್ತ್ರಿಯವರು ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದವರು. ದೇಶಸೇವೆಗಿಂತ ಮಿಗಿಲಾದ ಕರ್ತವ್ಯವಿಲ್ಲ ಎಂಬುದನ್ನು ಸಾಧಿಸಿ, ತೋರಿಸಿದವರು.ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜೀವನ ಮತ್ತು ಸಾಧನೆ ಎಲ್ಲಾ ಭಾರತೀಯರಿಗೂ ಸ್ಫೂರ್ತಿ ನೀಡುವಂತದ್ದು. ಈ ಮಹಾ ನಾಯಕರು ಕೊಡುಗೆಯಾಗಿ ಕೊಟ್ಟ ಈ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಕಾಪಿಟ್ಟುಕೊಳ್ಳಬೇಕಾದದ್ದು, ಗಾಂಧಿ ಮತ್ತು ಶಾಸ್ತ್ರಿಯವರ ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಮಾತನಾಡುತ್ತಾ ” ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆದರ್ಶಗಳು ಸಾರ್ಥಕಗೊಳ್ಳುವಲ್ಲಿ ನಮ್ಮೆಲ್ಲರ ಸಹಭಾಗಿತ್ವ ಅತ್ಯಂತ ಅವಶ್ಯಕ. ನಾವು ಈ ಮಹಾನಾಯಕರ ಬದುಕಿನ ಹೋರಾಟದ ಕಥೆಗಳು ಮತ್ತು ಸಂದೇಶಗಳನ್ನು ಇಂದಿನ ಮಕ್ಕಳಿಗೆ ಅರ್ಥೈಸಿಕೊಡಬೇಕಾಗಿದೆ. ದೇಶಪ್ರೇಮ ಮತ್ತು ಸೇವಾ ಮನೋಭಾವಗಳನ್ನು ಅವರಲ್ಲಿ ತುಂಬಬೇಕಾಗಿದೆ. ಈ ಕಾರ್ಯ ಯಶಸ್ವಿಯಾಗುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಧಾನವಾದುದು” ಎಂದು ತಿಳಿಸಿದರು.
ಗಾಂಧೀಜಿಯವರು ತುಂಬಾ ಇಷ್ಟಪಟ್ಟು ಕೇಳುತ್ತಿದ್ದ ಕೆಲವು ಹಾಡು ಮತ್ತು ಭಜನೆಗಳನ್ನು ಸಹಶಿಕ್ಷಕಿ ಅನ್ನಪೂರ್ಣ ಮತ್ತು ತಂಡದವರು ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಬೋಧಕ- ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
















