ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯ ರಕ್ಷಣೆ, ರಕ್ತಹೀನತೆ ತಡೆಗಟ್ಟುವುದು ಮತ್ತು ಪೌಷ್ಟಿಕ ಆಹಾರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೇಂದ್ರ ಸರಕಾರದ ಪೋಷಣ್ ಅಭಿಯಾನ ಮತ್ತು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸೋಮವಾರ ಆಯೋಜಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಪ್ರೇಮಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಉತ್ತಮಪಡಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಲು ಮನೆಯಲ್ಲಿಯೇ ವಹಿಸಬೇಕಾದ ಕಾಳಜಿಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಅವರು ಪೋಷಣ್ ಅಭಿಯಾನದ ವಿವರ ನೀಡಿ, ಸೀಮಂತ, ಅನ್ನಪ್ರಾಶನ ಮುಂತಾದ ಸಾಂಪ್ರದಾಯಿಕ ಆಚರಣೆಗಳ ಮೂಲಕ ಜಾಗೃತಿ ತಲುಪಿಸುವ ಕಾರ್ಯವನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯತ್ ಪಿಡಿಒ ರವೀಂದ್ರರಾವ್ ಮಾತನಾಡಿ, ಗ್ರಾಮಸ್ಥರು ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕೆಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ ನಾರಾಯಣ ನಾಯ್ಕ್ ವಹಿಸಿದ್ದರು.
ವಿಶೇಷ ಆಕರ್ಷಣೆಗಳು ಹಾಗೂ ಚಟುವಟಿಕೆಗಳು:
ಅಂಗನವಾಡಿ ಕೇಂದ್ರದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು
ಆಕರ್ಷಕ ರಂಗೋಲಿ ಹಾಗೂ ಧಾನ್ಯಗಳು, ಹೂವುಗಳು, ಸೊಪ್ಪು ತರಕಾರಿಗಳು, ಹಣ್ಣು-ಹಂಪಲುಗಳು, ಷೌಷಧಿ ಸಸ್ಯಗಳು, ಒಣ ಹಣ್ಣುಗಳು ಹಾಗೂ ವಿವಿಧ ಬೀಜಗಳನ್ನು ಬಳಸಿ ಆಕರ್ಷಕ ರಂಗೋಲಿ ಮತ್ತು ಪ್ರದರ್ಶನವನ್ನು ಸಿದ್ಧಪಡಿಸಲಾಗಿತ್ತು.
ಗರ್ಭಿಣಿ ಮಹಿಳೆಗೆ ಸೀಮಂತ, ಬಾಣಂತಿ ಮಗುವಿಗೆ ಅನ್ನಪ್ರಾಶನ ಹಾಗೂ ಕೇಂದ್ರದ ಮುದ್ದು ಮಕ್ಕಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸ್ಪರ್ಧೆಗಳು ಹಾಗೂ ಬಹುಮಾನ: ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಅತ್ಯುತ್ತಮ ಪೌಷ್ಟಿಕ ತಿನಿಸು/ಪಾನೀಯ ತಯಾರಿಸಿದ ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು.
ಪರಿಸರ ಜಾಗೃತಿ: ಸ್ಥಳೀಯ ಪತ್ರಕರ್ತರೊರ್ವರ ಹುಟ್ಟುಹಬ್ಬದ ಅಂಗವಾಗಿ ಅತಿಥಿಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ಕೊಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಆರೋಗ್ಯ ತಪಾಸಣೆ ಹಾಗೂ ಸನ್ಮಾನ: ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪೋಷಣ್ ಅಭಿಯಾನ ತಾಲೂಕು ಸಂಯೋಜಕರಾದ ಜಯಕುಮಾರ್ ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಶಮಾ-ಶಕುರ್, ಡಾ. ಮಾಧವ ಪೈ, ನಿವೃತ್ತ ಪಿಡಿಒ ಬೆನ್ನಿ ಡಿಸೋಜ, ಮಾಜಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್, ಸದಸ್ಯರಾದ ಕೃಷ್ಣ ಪೂಜಾರಿ ಪಿ., ಸುರೇಶ ಕುಂದರ್,ಗ್ರಾಮ ಪಂಚಾಯತ್ ಕಾರ್ಯದರ್ಶಿ ಉಮೇಶ್,ಶ್ರೀ ರಾಮ ಗೆಳೆಯರ ಬಳಗದ ಅಕ್ಷಿತ್ ಪೂಜಾರಿ,ಸ್ಥಳೀಯ ಜನಪ್ರತಿನಿಧಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಊರಿನ ಸಾರ್ವಜನಿಕರು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್. ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಸಿಂಧು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ ಸ್ವಾಗತಿಸಿದರು.ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾಗೀರಥಿ ವಂದಿಸಿದರು.
ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೇಂದ್ರ ಸರಕಾರದ ಪೋಷಣ್ ಅಭಿಯಾನ ಮತ್ತು ವಿವಿಧ ಸಮಾಜಮುಖಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಪ್ರೇಮಮೂರ್ತಿ ಮಗುವಿಗೆ ಅನ್ನಪ್ರಾಶನ ಮಾಡಿದರು. ವೈದ್ಯಾಧಿಕಾರಿ ಶಮಾ-ಶಕುರ್, ಡಾ. ಮಾಧವ ಪೈ, ನಿವೃತ್ತ ಪಿಡಿಒ ಬೆನ್ನಿ ಡಿಸೋಜ, ಮಾಜಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್, ಸದಸ್ಯರಾದ ಕೃಷ್ಣ ಪೂಜಾರಿ ಪಿ ಇದ್ದರು.
ಕೋಟ.ಅ.೬ ಪೋಷಣ್ ಅಭಿಯಾನ
















