ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೊತ್ಸಾಹಿಸಲು ಕಲಾ ಪ್ರತಿಭೋತ್ಸವವನ್ನು ಏರ್ಪಡಿಸಿದ್ದು, ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ 8 ವರ್ಷದಿಂದ 14 ವರ್ಷದ ಒಳಗಿನ ಬಾಲಪ್ರತಿಭೆಗಳು, 14 ರಿಂದ 18 ವರ್ಷದೊಳಗಿನ ಕಿಶೋರ ಪ್ರತಿಭೆಗಳು ಹಾಗೂ 18 ರಿಂದ 30 ವರ್ಷದೊಳಗಿನ ಯುವಪ್ರತಿಭೆಗಳು ಭಾಗವಹಿಸಬಹುದಾಗಿದೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರನ್ನು ವಲಯಮಟ್ಟಕ್ಕೆ ಕಳುಹಿಸಿ ಕೊಡಲಾಗುವುದು, ವಲಯಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು. (ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ, ವಲಯ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವವರಿಗೆ ಪ್ರಯಾಣ ವಚ್ಚವನ್ನು ನೀಡಲಾಗುವುದು).
ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯು ವಯೋಮಿತಿ ದೃಢೀಕರಣಕ್ಕಾಗಿ ಶಾಲೆಯಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಶಾಲೆಯಿಂದ ಬಂದ ಅಭ್ಯರ್ಥಿಯಲ್ಲದಿದ್ದಲ್ಲಿ ಅವರ ವಯಸ್ಸಿನ ಬಗ್ಗೆ 10ನೇ ತರಗತಿಯ ಅಂಕಪಟ್ಟಿ ಅಥವಾ ಶಾಲೆಯಿಂದ ನೀಡಿರುವ ವಯಸ್ಸಿನ ದಾಖಲೆಯನ್ನು ಸ್ವೀಕರಿಸುವ ಪ್ರಮಾಣ ಪತ್ರ ಅಥವಾ ಸಕ್ಷಮ ಪ್ರಾಧಿಕಾರಗಳು ನೀಡುವ ಜನ್ಮ ಪ್ರಮಾಣ ಪತ್ರವನ್ನು ಅರ್ಜಿಯ ಜೊತೆಗೆ (ಅರ್ಜಿಗೆ ನಿಗದಿತ ನಮೂನೆ ಇರುವುದಿಲ್ಲ ಬಿಳಿ ಹಾಳೆಯಲ್ಲಿ ಸ್ವವಿವರಗಳನ್ನು ಬರೆದಿರಬೇಕು) ಲಗತ್ತಿಸಿ, ಸಲ್ಲಿಸಬೇಕು.
ಚಿತ್ರಕಲಾ ಸ್ಪರ್ಧಿಗಳು ತಮಗೆ ಬೇಕಾದ ಬಣ್ಣ ಇತ್ಯಾದಿಗಳನ್ನು ತಾವೇ ತರಬೇಕು. ನೃತ್ಯ ಪ್ರದರ್ಶನವನ್ನು ಲೈವ್ ಅಥವಾ ರೆಕಾರ್ಡ್ ಮೂಲಕ ಪ್ರದರ್ಶಿಸಬಹುದು (ಸ್ಪರ್ಧಿಗಳು ಪೆನ್ ಡ್ರೈವ್, ಅಥವಾ ಸಿ.ಡಿ.ಯನ್ನು ತಾವೇ ತರುವುದು, ಮೊಬೈಲ್ ಡಾಕ್ ಸೌಲಭ್ಯವನ್ನು ಒದಗಿಸಲಾಗುವುದು). ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಒಬ್ಬರಿಗೆ ಒಂದು ಕಲಾ ಪ್ರಕಾರದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ.
ಶಾಲಾ ಮುಖ್ಯಸ್ಥರು ತಮ್ಮ ಶಾಲಾ ಮೂಲಕ ಸ್ಪರ್ಧಿಗಳು ಅರ್ಜಿ ಸಲ್ಲಿಸುವಾಗ ಪ್ರತಿ ಪ್ರಕಾರ (ಸಂಗೀತ, ನೃತ್ಯ ಇತರೆ) ಹಾಗೂ ಪ್ರತಿ ವಿಭಾಗದ ಸ್ಪರ್ಧಿಗಳ ಜನ್ಮ ದಿನಾಂಕವನ್ನು ದೃಢೀಕರಿಸಿ, ಪಟ್ಟಿಯನ್ನು ಪ್ರತ್ಯೇಕವಾಗಿ ಕಳುಹಿಸಬೇಕು, ಖಾಸಗಿ ಸ್ಪರ್ಧಿಯಾಗಿದ್ದಲ್ಲಿ ಶಾಲಾ ಕಾಲೇಜಿನ ಜನ್ಮ ದಿನಾಂಕ ದೃಢೀಕರಣ ಪತ್ರ ಅಥವಾ ಪಂಚಾಯಿತಿ, ಪುರಸಭೆ, ನಗರಸಭೆಗಳಿಂದ ನೀಡುವ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಬಾಲಪ್ರತಿಭೆ/ ಕಿಶೋರ ಪ್ರತಿಭೆ ಕಲಾ ಪ್ರಕಾರಗಳ ವಿವರ:
ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ ( 07 ನಿಮಿಷ), ಚಿತ್ರಕಲೆ (120 ನಿಮಿಷ), ಜನಪದ ಗೀತೆ(07 ನಿಮಿಷ), ಹಿಂದೂಸ್ತಾನಿ ವಾದ್ಯ ಸಂಗೀತ ( 07 ನಿಮಿಷ) ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ (07 ನಿಮಿಷ).
ಯುವಪ್ರತಿಭೆ ಕಲಾ ಪ್ರಕಾರಗಳ ವಿವರ: ಆಶುಭಾಷಣ (7 ನಿಮಿಷ), ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಹಿಂದೂಸ್ತಾನಿ ವಾದ್ಯ ಸಂಗೀತ (7 ನಿಮಿಷ) ಹಾಗೂ ಜನಪದಗೀತೆ (7 ನಿಮಿಷ).
ಸಮೂಹ ಸ್ಫರ್ಧೆ (ಯುವ ಪ್ರತಿಭೆ ವಿಭಾಗ):
ನಾಟಕ (45 ನಿಮಿಷ) ಹಾಗೂ ಜನಪದ ನೃತ್ಯ (10 ನಿಮಿಷ).
ಜನಪದ ನೃತ್ಯ ವಿಭಾಗದಲ್ಲಿ ಜನಪದ ನೃತ್ಯ ಕುಣಿತಗಳಾದ ಸಿದ್ದಿ ಡಮಾಮಿ, ಡೊಳ್ಳು, ಗೊರವರ, ಗೊರುಕಾನ, ಜಗ್ಗಲಿಗೆ, ಕಂಗೀಲು, ಸೋಮನ ಕುಣಿತ, ಪಟಾ ಕುಣಿತ, ಕಂಸಾಳೆ, ಪೂಜಾ ಕುಣಿತ, ಜಡೆ ಕೋಲಾಟ ಲಂಬಾಣಿ, ಕರಡಿ ಮಜಲು, ಕೊಡವ ನೃತ್ಯಗಳು ಇತ್ಯಾದಿ ಗಳನ್ನು ಮಾತ್ರ ಪರಿಗಣಿಸಲಾಗುವುದು. ಜನಪದ ಗೀತೆಗಳ ಮುದ್ರಿತ ಹಾಡುಗಳ ನೃತ್ಯಗಳನ್ನು ಪರಿಗಣಿಸಲಾಗುವುದಿಲ್ಲ.
ಮೇಲ್ಕಂಡ ಎಲ್ಲಾ ಸ್ಪರ್ಧೆಗಳಿಗೆ ಭಾಗವಹಿಸುವವರು ಅರ್ಜಿಯನ್ನು ಅಕ್ಟೋಬರ್ 26 ರ ಸಂಜೆ 5 ಗಂಟೆಯೊಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿ, ಡಾ.ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಅಲೆವೂರು ಗ್ರಾಮ, ಮಣಿಪಾಲ ಅಂಚೆ, ಉಡುಪಿ ಜಿಲ್ಲೆ, ಇವರಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ದೂ:0820-2986168 ಹಾಗೂ ಮೊ: 9591475884 ಸಂಖ್ಯೆ ಅಥವಾ ಇ-ಮೇಲ್ kanndacultureudupi@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಕಛೇರಿ ಪ್ರಕಟಣೆ ತಿಳಿಸಿದೆ.
















