ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಖಿಲ ಕರ್ನಾಟಕ ಕೋಟೆಗಾರ ಸಂಘ ರಿ. ಪ್ರಾಯೋಜಕತ್ವದ ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟವು ಬೈಂದೂರಿನ ಯಡ್ತರೆ ಜೆಎನ್‍ಆರ್ ಕಲಾ ಮಂದಿರದಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.
ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಒಕ್ಕೂಟವನ್ನು ಉದ್ಘಾಟಿಸಿ, ಸಮುದಾಯ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದರು. ಯುವ ಪೀಳಿಗೆಯನ್ನು ಅಭಿವೃದ್ಧಿ ಮತ್ತು ಕಲ್ಯಾಣದತ್ತ ಕೊಂಡೊಯ್ಯಲು ವೈಚಾರಿಕ ಬದಲಾವಣೆ ಅಗತ್ಯ ಎಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್, ವೈದ್ಯಕೀಯ ನಿರ್ದೇಶಕರು, ಪ್ರಸಾದ್ ನೇತ್ರಾಲಯ ವಹಿಸಿದ್ದರು. ಕೋಟೆಗಾರ ಎಂದರೆ ಸತ್ಯ, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಇನ್ನೊಂದು ಹೆಸರು ಎಂದು ಅವರು ಬಣ್ಣಿಸಿದರು. ಯುವಕರು ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳನ್ನು ಅರಿತು ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ಕೊತ್ತಾಲ್ ಪದ್ಮನಾಭ ಶೇರುಗಾರ್ ಗಂಗೊಳ್ಳಿ ಅವರು ಸ್ವೀಕಾರ ಭಾಷಣದಲ್ಲಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯತಂತ್ರದ ಯೋಜನೆಗಳನ್ನು ತಂಡವಾಗಿ ರೂಪಿಸುವುದಾಗಿ ತಿಳಿಸಿದರು.
ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರೇಗಾರ್ ಹೆಬ್ರಿ ಸ್ವಾಗತಿಸಿದರು. ಡಾ. ರಾಜೇಂದ್ರ ಕೆ. ಅವರು ಕೋಟೆಗಾರ ರಾಮಕ್ಷತ್ರಿಯ ಸಮುದಾಯದ ಇತಿಹಾಸ ಮತ್ತು ಪರಂಪರೆ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ:
ಡಿಎಫ್‍ಒ ಗೋಡಂಬಿ ಅಭಿವೃದ್ಧಿ ಮಂಡಳಿಯ ಪಿ. ಶ್ರೀಧರ್, ಮಂಗಳೂರು ಎಸಿಪಿ ಕೆ. ಶ್ರೀಕಾಂತ್, ವಾಣಿಜ್ಯ ತೆರಿಗೆ ಸಹಾಯಕ ಕಮಿಷನರ್ ಸತೀಶ್ ಬಟವಾಡಿ, ಮಂಜುಳಾ ಜೈಕರ್ ಸೇರಿದಂತೆ ಹಲವರನ್ನು ಗೌರವಿಸಲಾಯಿತು. SSLC, PUC ಮತ್ತು ವೃತ್ತಿಪರ ಕೋರ್ಸ್‍ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೋಟೆಗಾರ ರಾಮಕ್ಷತ್ರಿಯ ಸಮಾಜದ ಮುಖಂಡರಾದ ಸುರೇಶ ಬಟ್ವಾಡಿ, ಸದಾಶಿವ ಡಿ, ಗಣಪತಿ ಹೋಬಳಿದಾರ, ಮಂಜುನಾಥ್ ಎನ್., ಸಮಸ್ತ ರಾಮಕ್ಷತ್ರಿಯ ಮತ್ತು ಕೋಟೆಗಾರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಡಾ. ಬಾಲಕೃಷ್ಣ ಎಸ್. ಮದ್ದೋಡಿ ವಂದನಾರ್ಪಣೆ ಮಾಡಿದರು. ಉಡುಪಿ ಜಿಲ್ಲೆಯ ಕೋಟೆಗಾರ ಕಲಾವಿದರಿಂದ ಸಾಂಸ್ಕೃತಿಕ ಸಂಗೀತ-ನೃತ್ಯ ಕಾರ್ಯಕ್ರಮ ನಡೆಯಿತು.

















