ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸೇವೆ, ಧರ್ಮ, ಸಂಸ್ಕೃತಿ, ಶಿಕ್ಷಣ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಪ್ರೇರಣೆಯ ಬೆಳಕಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಮ್ಮ ನಾಡಿನ ಹೆಮ್ಮೆಯ ವ್ಯಕ್ತಿತ್ವ. ಧರ್ಮಸ್ಥಳದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಮಾಜದ ಅಭಿವೃದ್ಧಿ, ಗ್ರಾಮೀಣ ಸಬಲೀಕರಣ, ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ ಮೇಸ್ತ ಹೇಳಿದರು.
ಅವರು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮ ದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ವಲಯ ಆಶ್ರಯದಲ್ಲಿ ಕೊಡಪಾಡಿಯ ಹೋಲಿಕ್ರಾಸ್ ವೃದ್ಧಾಶ್ರಮದಲ್ಲಿ ಬುಧವಾರ ಜರಗಿದ ಸೇವಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಜಾಗೃತಿ ವೇದಿಕೆ ಸದಸ್ಯ ಬಿ.ರಾಘವೇಂದ್ರ ಪೈ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ, ಅವರ ಸೇವಾ ಮನೋಭಾವ, ದೂರದೃಷ್ಟಿ ಮತ್ತು ಮಾನವೀಯ ಚಿಂತನೆಗಳು ಸದಾ ಸಮಾಜಕ್ಕೆ ಮಾರ್ಗದರ್ಶಕವಾಗಲಿ. ಅವರಿಗೆ ಆಯುರಾರೋಗ್ಯ, ಶಾಂತಿ ಹಾಗೂ ಇನ್ನ? ಸಮಾಜಸೇವೆಗೆ ಶಕ್ತಿ ದೊರೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ವೃದ್ಧಾಶ್ರಮದ ವಯೋವೃದ್ಧರಿಗೆ ಬಟ್ಟೆ ಹಾಗೂ ಸಿಹಿತಿಂಡಿಯನ್ನು ವಿತರಿಸಿ ಊಟದ ವ್ಯವಸ್ಥೆ ಮಾಡಲಾಯಿತು. ಹೋಲಿಕ್ರಾಸ್ ವೃದ್ಧಾಶ್ರಮದ ಸುಪಿರೀಯರ್ ಸೆಲೆಸ್ಟಿನ್ ಆಳ್ವಾ, ವೃದ್ಧಾಶ್ರಮದ ಉಸ್ತುವಾರಿ ಸ್ಟೆಲ್ಲಾ ಡಯಾಸ್, ಫ್ಲೆವಿಯಾ ಮೆಂಡೋನ್ಸಾ, ಯೋಜನೆಯ ತ್ರಾಸಿ ವಲಯ ಮೇಲ್ವಿಚಾರಕ ಭರತ್ ಪಟಗಾರ್, ಕಚೇರಿಯ ಹಣಕಾಸು ಪ್ರಬಂಧಕಿ ಮಲ್ಲಿಕಾ, ಸೇವಾ ಪ್ರತಿನಿಧಿಗಳಾದ ಪುಷ್ಪಾ, ಮಹಾಲಕ್ಷ್ಮೀ, ನಾಗರತ್ನ, ನೀಲಾ, ಗುಜ್ಜಾಡಿ ಎ ಒಕ್ಕೂಟದ ಅಧ್ಯಕ್ಷೆ ವೀಣಾ ಮೇಸ್ತ, ಒಕ್ಕೂಟದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.














