ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ISAP (Information Search, Analysis and Presentation) ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಉಪಸ್ಥಿತರಿದ್ದ ಗಣ್ಯರನ್ನು, ಅಧ್ಯಾಪಕರನ್ನು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ISAP ಕಾರ್ಯಕ್ರಮದ ಮಹತ್ವವನ್ನು ವಿವರಿಸುತ್ತಾ, ತಂತ್ರಜ್ಞಾನ ಲೋಕದಲ್ಲಿ ಯಶಸ್ಸು ಗಳಿಸಲು ಸರಿಯಾದ ಮಾಹಿತಿಯನ್ನು ಹುಡುಕುವುದು, ಅದನ್ನು ವಿಶ್ಲೇಷಿಸುವುದು ಹಾಗೂ ಸಮರ್ಥವಾಗಿ ಪ್ರಸ್ತುತಪಡಿಸುವುದು ಅತ್ಯಗತ್ಯ. ಈ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆ ಮತ್ತು ವೃತ್ತಿಪರ ಬೆಳವಣಿಗೆಗೆ ಭದ್ರ ಬುನಾದಿ ಹಾಕುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ಅವರು ಭಾಗವಹಿಸಿ ಮಾತನಾಡಿ, “ಇಂದಿನ ಯುವ ಪೀಳಿಗೆಯಲ್ಲಿ ಅಪಾರ ಪ್ರತಿಭೆ ಹಾಗೂ ಅಗಾಧವಾದ ಸಾಮರ್ಥ್ಯ (Immense Potential) ಅಡಗಿದೆ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವ ಸೃಜನಶೀಲತೆ ಮತ್ತು ನೈಜ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕು,” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಂ.ಜೆ. ಸಂಸ್ಥೆಗಳ ಅಕಾಡೆಮಿಕ್ಸ್ ವಿಭಾಗದ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ತಾರ್ಕಿಕ ಚಿಂತನೆ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸಲು ಅತ್ಯುತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿ ಅವರು ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ, ಕಾಲೇಜಿನ ವಿವಿಧ ವಿಭಾಗಗಳ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ತಮ್ಮ ವಿಭಾಗಗಳಲ್ಲಿ ಆಯೋಜಿಸಲಾದ ತಾಂತ್ರಿಕ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಸ್ತುತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾದ್ಯಾಪಕಿ ಫ಼ರಾನ ಇಮ್ರಾನ್ ಅತಿಥಿ ಪರಿಚಯ ನೀಡಿದರು. ಪ್ರಾದ್ಯಾಪಕಿ ಅಕ್ಷತ ಕಾಮತ್ ವಂದಿಸಿದರು ಹಾಗೂ ವಿದ್ಯಾರ್ಥಿನಿ ಅಲಿಶಾ ಬಿಷಪ್ ಕಾರ್ಯಕ್ರಮ ನಿರೂಪಿಸಿದರು.

















