ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಮಹಾತ್ಮಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ನಾಟ್ಯ ರಾಣಿ ಶಾಂತಲೆ ಸ್ವರ್ಣ ಪ್ರಶಸ್ತಿ, ಸ್ವರ್ಣಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕರಾಟೆ ಪಟು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ. ಶಿಹಾನ್ ಸುಬ್ರಹ್ಮಣ್ಯ ಪಿ. ಅವರನ್ನು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿ ಆಧ್ಯಾತ್ಮಿಕ ಕೇಂದ್ರದ ಪರಮಪೂಜ್ಯ ಸದ್ಗುರು ಶ್ರೀ ಬಸವಯೋಗಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯವಿತ್ತು.
ಮುಖ್ಯ ಅತಿಥಿಗಳಾಗಿ ವೀಣಾ ಕಾಶಪ್ಪನವರ್, ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಮೊಹಮ್ಮದ್ ಅಲಿ ಹಾಗೂ ಖ್ಯಾತ ನಿರೂಪಕ, ಸಾಹಿತಿ ಮತ್ತು ಸಾಮಾಜಿಕ ಚಿಂತಕ ಡಾ. ವೆಂಕಟೇಶ್ ಆರ್. ಚೌಧಾಯಿ ಉಪಸ್ಥಿತರಿದ್ದರು.
ನಾಟ್ಯ ಮಯೂರಿ ನೃತ್ಯ ಟ್ರಸ್ಟ್ನ ಪುಷ್ಪಲತಾ ಶಿವಪ್ಪ, ಸ್ಥಾಪಕ ಅಧ್ಯಕ್ಷರಾದ ಬಾಬಾ ಶಂಕರ್ ಹಾಗೂ ವಿದುಷಿ ಪ್ರೇಮಾಜರ ಆಚಾರ್ಯ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭವು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾಧಕರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮಹತ್ವದ ವೇದಿಕೆಯಾಗಿ ಕಾರ್ಯಕ್ರಮ ಗಮನ ಸೆಳೆಯಿತು.

















