ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ಲೋಬಲ್ ಯೋಗ ಹಾಗೂ ರೋಟರಿ ಬೆಂಗಳೂರು ವತಿಯಿಂದ ಬೆಂಗಳೂರಿನ ಜೆ.ಸಿ. ರಸ್ತೆಯ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ 2026’ ಕಾರ್ಯಕ್ರಮದಲ್ಲಿ ಯೋಗ ಸಾಧಕರಾದ ಮಂಜುನಾಥ ದೇವಾಡಿಗ ಇವರ ಅನುಪಮವಾದ ಯೌಗಿಕ ಸೇವೆಯನ್ನು ಗುರುತಿಸಿ ‘ರಾಷ್ಟ್ರೀಯ ಯೋಗ ಸಾಧಕ ಪ್ರಶಸ್ತಿ’ ಯೋಗಶ್ರೀ 2026ನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಭಾರತದ ಸಮರ್ಪಿತ ಯೋಗ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಸಲುವಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಶಸ್ತಿ ಪಡೆದ ಯೋಗ ಸಾಧಕರಿಗೆ ವಿವಿಧ ಗಣ್ಯರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ದೇವಾಡಿಗ ಅವರು ಡಿಪ್ಲೋಮಾ ಇನ್ ಯೋಗ ಎಜುಕೇಶನ್ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿದ್ದು,ಯೋಗಾಸನ ಸ್ಪರ್ಧೆಯ ರಾಜ್ಯ ತೀರ್ಪುಗಾರರಾಗಿಯೂ ಆಯ್ಕೆಯಾಗಿದ್ದಾರೆ.
ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ರಾಜ್ಯ ಮಟ್ಟದ ಯೋಗ ಸಂಪನ್ಮೂಲ ವ್ಯಕ್ತಿಯಾಗಿದ್ದು, ಹಲವಾರು ಜಿಲ್ಲೆಗಳಲ್ಲಿ ರಜಾ ಅವಧಿಯ ಯೋಗ ಶಿಬಿರಗಳಲ್ಲಿ ಭಾಗವಹಿಸಿದ್ದು, ಸಾರ್ವಜನಿಕರಿಗೆ ಉಚಿತ ಯೋಗ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಬೈಂದೂರಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

















