ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ, ಹಾಗೂ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ನಾಲ್ಕನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ 2026 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ತಲದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಎಂಆರ್ಪಿಎಲ್ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿಯಾದ ಅಶೋಕ್ ಕುಮಾರ್ ಹೆಗ್ಡೆ ಉದ್ಘಾಟಿಸಿ, ಎನ್ಎಸ್ಎಸ್ ಶಿಬಿರವು ಕ್ರಿಯೇಟಿವ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಒದಗಿಸಿದ ಒಂದು ಉತ್ತಮ ಅವಕಾಶ. ಈ ಶಿಬಿರದ ಮೂಲಕ ಉತ್ತಮ ಮೌಲ್ಯಗಳನ್ನು ಕಲಿತುಕೊಂಡು ದೇಶಕ್ಕೆ ಕೊಡುಗೆಯನ್ನು ನೀಡುವವರಾಗಬೇಕು. ವಿದ್ಯಾರ್ಥಿಗಳ ಮುಂದಿನ ಭವಿಷ್ಯತ್ತಿನಲ್ಲಿ ಶಿಸ್ತು ಬದ್ಧ ಜೀವನವನ್ನು ನಡೆಸಲು ಈ ಶಿಬಿರವು ಅಡಿಪಾಯವಾಗಲಿದೆ. ಮಾತ್ರವಲ್ಲದೆ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತುಗಳನ್ನಾಡಿದರು.
ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದ ಸಹ ಸಂಸ್ಥಾಪಕರು ಹಾಗೂ ಈ ಶಿಬಿರದ ರುವಾರಿಗಳಾದ ಡಾ. ಗಣನಾಥ ಶೆಟ್ಟಿ ಬಿ. ಅವರು, ಏಳು ದಿನಗಳ ಕಾಲ ನಡೆಯುವ ಈ ಶಿಬಿರದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ ‘ನನ್ನ ಭಾರತಕ್ಕಾಗಿ ಯುವ ಜನತೆ’ ಎಂಬ ಶೀರ್ಷಿಕೆಯಡಿ ಈ ಶಿಬಿರವು ನಡೆಯಲಿದೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ದೇಶದ ಯುವ ಜನತೆ ದಾರಿ ತಪ್ಪುತ್ತಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶಕ್ಕೋಸ್ಕರ ಯುವ ಜನತೆ, ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡುವ ಉದ್ದೇಶದಿಂದ ಭವ್ಯ ಭಾರತಕ್ಕಾಗಿ ಯುವಕರನ್ನು ಗುರಿಯನ್ನಾಗಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಡ್ತಲ ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷರಾದ ಸುಕೇಶ್ ಹೆಗ್ಡೆಅವರು, ಮಕ್ಕಳಲ್ಲಿ ಕೇವಲ ಶಿಕ್ಷಣವನ್ನು ಕಲಿಸುವುದು ಮಾತ್ರವಲ್ಲದೆ ಎನ್ ಎಸ್ ಎಸ್ ನಂತಹ ಶಿಬಿರವನ್ನು ನಡೆಸುವುದರ ಮುಖೇನ ಕ್ರಿಯೇಟಿವ್ ಸಂಸ್ಥೆ ಮಾನವೀಯ ಮೌಲ್ಯವನ್ನು ಬಿತ್ತುವುದರ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಅಜೆಕಾರು ಆರಕ್ಷಕ ಠಾಣೆಯ ಪಿಎಸ್ಐ ಲಕ್ಷ್ಮಣ ಪ್ರಭು ಮಾತುಗಳನ್ನಾಡುತ್ತ, ಇಂದಿನ ಎನ್ ಎಸ್ ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಚಟುವಟಿಕೆಗಳನ್ನು ತೋರ್ಪಡಿಸಲು ಒಂದು ಅದ್ಭುತ ವೇದಿಕೆಯಾಗಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ. ಅವರು, ಎನ್ಎಸ್ಎಸ್ ಶಿಬಿರವು ಬೆಳೆದು ಬಂದ ಹಾದಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ , ಶಿಬಿರದ ಉದ್ದೇಶ ವಿದ್ಯಾರ್ಥಿಗಳಲ್ಲಿ ಆಗುವ ಬದಲಾವಣೆಗಳೇನು ಎನ್ನುವುದನ್ನು ಅರಿತುಕೊಳ್ಳುವುದು ಅತಿ ಮುಖ್ಯ. ಸಾಮಾಜಿಕ ಕಳಕಳಿ, ಶಿಸ್ತು ದೇಶಭಕ್ತಿಯನ್ನು ತುಂಬಲು ಎನ್ ಎಸ್ ಎಸ್ ಶಿಬಿರವನ್ನು ಪ್ರಾರಂಭಿಸಲಾಗಿದೆ. ನಿಸ್ವಾರ್ಥತೆಯಿಂದ ಸಮಾಜಸೇವೆ ಮಾಡುವ ತತ್ವವನ್ನು ಮೈಗೂಡಿಸಿಕೊಳ್ಳಲು ಎನ್ಎಸ್ಎಸ್ ಸಹಕಾರಿಯಾಗಲಿದೆ ಎಂದು ಅಧ್ಯಕ್ಷೀಯ ನುಡಿಗಳ ನ್ನಾಡಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕರುಣಾಕರ ಹೆಗ್ಡೆ, ಎನ್ಎಸ್ಎಸ್ ಸಂಯೋಜನಾಧಿಕಾರಿ ಉಮೇಶ್, ಅಜೆಕಾರು ಠಾಣೆಯ ಆನಂದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಲೋಹಿತ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು, ಊರಿನ ಗಣ್ಯರು ಉಪಸ್ಥಿತರಿದ್ದರು.

















