ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅಂಪಾರು ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ ಹಾಗೂ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ರಿ. ಅಂಪಾರು ಇದರ ವತಿಯಿಂದ ಆಯೋಜಿಸಲಾದ ‘ಸಂಜಯ ಸಿಂಚನ – ಮೌಲ್ಯಮಾಲಿಕೆ 3’ ಕಾರ್ಯಕ್ರಮ ನಡೆಯಿತು.
ಮೌಲ್ಯ ಸಾರಥಿಯಾಗಿ ಭಾಗವಹಿಸಿದ ರಂಜನಾ ಪ್ರಭು ಅವರು ವಿದ್ಯಾರ್ಥಿಗಳಿಗೆ ಜೀವನಮೌಲ್ಯಗಳ ಮಹತ್ವವನ್ನು ತಿಳಿಸಿ, ಮಾತನಾಡಿ, ಪೋಷಕರನ್ನು ಗೌರವಿಸುವುದು, ಅವರನ್ನು ಪ್ರೀತಿಯಿಂದ ಕಾಣುವುದು, ಅವರ ಮಾತುಗಳಿಗೆ ಕಿವಿಗೊಡುವುದು ಹಾಗೂ ನಮ್ಮ ಮಾತುಗಳಿಂದಾಗಲಿ, ನಡವಳಿಕೆಯಿಂದಾಗಲಿ ಅವರಿಗೆ ನೋವುಂಟು ಮಾಡದಿರುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ತಮ್ಮ ಜೀವನದ ಅನುಭವಗಳನ್ನು ಹಾಗೂ ವಿವಿಧ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಜೀವನದ ಅಮೂಲ್ಯ ಪಾಠಗಳನ್ನು ಮನಮುಟ್ಟುವಂತೆ ತಿಳಿಸಿದರು. ಅವರ ಬದುಕಿನ ಪಯಣವೇ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಪಾಠವಾಗಿ ಮೂಡಿಬಂತು.
ಭಯ, ಭಕ್ತಿ ಹಾಗೂ ಆಸ್ತಿಕ ಮನೋಭಾವಗಳು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತವೆ. ತಪ್ಪುಗಳನ್ನು ಮಾಡದಂತೆ ಎಚ್ಚರಿಸುತ್ತವೆ. ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶೈಕ್ಷಣಿಕ ನಿರ್ದೇಶಕರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಉಪಸ್ಥಿತರಿದ್ದು, ಮೌಲ್ಯ ಸಾರಥಿ ರಂಜನಾ ಪ್ರಭು ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಉತ್ತಮ ಚಿಂತನೆ, ಪೋಷಕರ ಬಗೆಗಿನ ಗೌರವ ಮತ್ತು ಜೀವನಮೌಲ್ಯಗಳ ಕುರಿತು ಹೊಸ ಅರಿವನ್ನು ಮೂಡಿಸಿತು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತೋಷ ಮತ್ತು ಸ್ಫೂರ್ತಿಯಿಂದ ಹರ್ಷಚಿತ್ತರಾಗಿ ಕಂಡುಬಂದರು.

















