ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೈಬರ್ ಕ್ರೈಮ್ಗೆ ಒಳಗಾಗುವವರು ಸಮಾಜದ ಸುಶಿಕ್ಷಿತ ವ್ಯಕ್ತಿಗಳೇ ಆಗಿದ್ದು, ಯಾವುದೇ ಎಪಿಕೆ ಫೈಲ್ಸ್ಗಳನ್ನು ತೆರೆಯುವ ಮುಂಚೆ, ಸುಳ್ಳು ಆಪಾದನೆ ಹೊರಿಸಿ ಸಿಕ್ಕಿಸಿ ಹಾಕುವಂಥ ಡಿಜಿಟಲ್ ಎರೆಸ್ಟ್ ನಂಥ ನಯವಂಚನೆಯ ಬಗ್ಗೆ ಎಚ್ಚರವಿರಬೇಕು. ಭೀತಿ ಹುಟ್ಟಿಸಿ ನಡೆಸುವ ಮೋಸದ ಜಾಲದಲ್ಲಿ, ಆ್ಯಪ್ಗಳ ಸಾಲದ ಸುಳಿಯಲ್ಲಿ ಸಿಲುಕದ ಹಾಗೆ ಜಾಗೃತರಾಗುವ ಮಾಹಿತಿಯನ್ನು ಯುವಜನರು ಪಡೆಯುತ್ತಿರಬೇಕು” ಎಂದು ಕುಂದಾಪುರ ಪೊಲೀಸ್ ಠಾಣಾಧಿಕಾರಿ ನಂಜ ನಾಯ್ಕ ಹೇಳಿದರು.
ಅವರು ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಕುಂದಾಪುರ ಪೊಲೀಸ್ ಠಾಣೆ ಅವರು ಆಯೋಜಿಸಿದ ‘ಸೈಬರ್ ಕ್ರೈಮ್ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಕರೆ ನೀಡಿದರು.
ಕುಂದಾಪುರ ಠಾಣೆಯ ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ಮಂಜುಳಾ ಹಮ್ಮರ್ ಅವರು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದ ಪೋರ್ಟಲ್ಸ್ ಬಳಸುವ ಮೊದಲು ಸೆಕ್ಯೂರಿಟಿ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸಿ, ಡೀಪ್ ಫೇಕ್ ತಂತ್ರಜ್ಞಾನದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು’ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ಆರಕ್ಷಕ ಠಾಣೆಯ ಸಿಬ್ಬಂದಿಗಳಾದ ವಿಲ್ಫ್ರೆಡ್ ಡಿಸೋಝಾ ಮತ್ತು ರಾಜು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

















